ಬೆಂಗಳೂರು: ಸೈಡ್ ಕೊಡಲಿಲ್ಲ ಎಂಬ ನೆಪ ಹೇಳಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಹಿಗ್ಗಾ ಮುಗ್ಗಾ ಥಳಿಸಿ ಚಾಕುವಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಓದುತ್ತಿರುವ 17 ವರ್ಷದ ಯುವಕನ ಮೇಲೆ ದುಷ್ಕರ್ಮಿಗಳು ನಡುರಸ್ತೆಯಲ್ಲೇ ಚಾಕು ಇರಿದಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ, ಪಾರ್ಟ್ ಟೈಮ್ ಬೈಕ್ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತ ವಿದ್ಯಾಭ್ಯಾಸ ಮಾಡುತ್ತಿದ್ದ, ಆತ ತನ್ನ ಸ್ನೇಹಿತರೊಂದಿಗೆ ಜ್ಯೂಸ್ ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ಸವಾರನೊಬ್ಬ ಸೈಡ್ ಕೊಡುವಂತೆ ಹಲವು ಬಾರಿ ಹಾರ್ನ್ ಮಾಡಿದ್ದಾನೆ. ವಿದ್ಯಾರ್ಥಿ ದಾರಿ ಬಿಟ್ಟು ಕೊಟ್ಟಿದ್ದಾನೆ. ಆದರೂ ಸುಮ್ಮನಿರದ ಸವಾರ, ಕಿರುಚಾಡಿ ಜಗಳಕ್ಕಿಳಿದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಳಿಕ ಅಲ್ಲಿಂದ ಕಾಲ್ಕಿತ್ತ ಸವಾರ ಇನ್ನೋರ್ವ ಬೈಕ್ ಸವಾರನಿಂದಿಗೆ ಬಂದು ವಿದ್ಯಾರ್ಥಿಯ ವಾಹನವನ್ನು ಅಡ್ಡಗಟ್ಟಿದ್ದಾನೆ. ಆತನ ಬೈಕ್ ಕೀಲಿಯನ್ನು ಕಸಿದುಕೊಂಡ ಇಬ್ಬರೂ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಸಮೀಪದ ಬಾರ್ ಒಂದರ ಬಳಿ ಕರೆದುಕೊಂಡು ಹೋಗಿದ್ದಾರೆ. ಸಮಯ ಸಾಧಿಸಿ ವಿದ್ಯಾರ್ಥಿಗೆ ದೊಣ್ಣೆಯಿಂದ ಥಳಿಸಲು ಮುಂದಾಗಿದ್ದಾರೆ. ಈ ವೇಳೆ ವಿದ್ಯಾರ್ಥಿಯ ಸಂಬಂಧಿಕರೊಬ್ಬರು ಮಧ್ಯ ಪ್ರವೇಶಿಸಿ ದುಷ್ಕರ್ಮಿಗಳ ದಾಳಿ ತಡೆದಿದ್ದಾರೆ.
ವಿದ್ಯಾರ್ಥಿ ಸ್ವಲ್ಪ ದೂರ ನಡೆದು ಹೋಗುತ್ತಿದ್ದಾಗ ಮತ್ತೆ ಅದೇ ಗುಂಪಿನ ಇಬ್ಬರು ಬೈಕ್ ನಲ್ಲಿ ಬಂದು ರಸ್ತೆಯಲ್ಲಿ ನಿಂತಿದ್ದಾರೆ. ವಿದ್ಯಾರ್ಥಿ ಬರುತ್ತಿದ್ದಂತೆ ಅವನನ್ನು ರಸ್ತೆ ಬದಿಗೆ ಎಳೆದುಕೊಂಡು ಬಂದು ಚಾಕುವಿನಿಂದ ಎದೆ, ಕುತ್ತಿಗೆ, ಬೆನಿಗೆ ಮನಬಂದಂತೆ ಇರಿದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಸ್ಥಳೀಯರು ಮತ್ತು ಹಾದಿಹೋಕರು ರಕ್ಷಿಸಿ, ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳು ವಿದ್ಯಾರ್ಥಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗಾಯಾಳು ವಿದ್ಯಾರ್ಥಿಯ ಪೋಷಕರು ದೂರು ದಾಅಖಲಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಬಲೆ ಬೀಸಿದ್ದಾರೆ.

