ಬಳ್ಳಾರಿ: ಬಳ್ಳಾರಿ ಜಿಲ್ಲಾಡಳಿತ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಶಾಕ್ ನೀಡಿದೆ. ಜನಾರ್ಧನ ರೆಡ್ಡಿ ಮಾಲೀಕತ್ವದ ಜಿ ಸ್ಕ್ವೇರ್ ನಿರ್ಮಾಣ ಸಂಸ್ಥೆ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸಿದೆ.
1 ಎಕರೆ 25 ಗುಂಟೆ ಜಾಗವನ್ನು ಬಳ್ಳಾರಿ ಜಿಲ್ಲಾಡಳಿತದಿಂದ ತೆರವುಗೊಳಿಸಲಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಲಾಗಿತ್ತು. ಇತರರಿಂದ ಒತ್ತುವರಿ ಸೇರಿ ಒಟ್ಟು 4 ಎಕರೆ ಜಾಗ ತೆರವು ಮಾಡಲಾಗಿದ್ದು, ನಾಲ್ಕೂ ಎಕರೆ ಜಾಗದಲ್ಲೂ ಸುಸಜ್ಜಿತ ಕಾಂಪೌಂಡ್ ನಿರ್ಮಿಸಲಾಗಿತ್ತು.
ಬಳ್ಳಾರಿ ಎಡಿಸಿ ಜಬೇರ್ ಅಹ್ಮದ್ ಮತ್ತು ಎಸಿ ರಾಜೇಶ್ ನೇತೃತ್ವದಲ್ಲಿ ತೆರವು ಕಾರ್ಯ ನಡೆದಿದೆ. ಇನ್ನು ತೆರವು ಕಾರ್ಯಚರಣೆ ಮುಗಿದ ಬೆನ್ನಲ್ಲೇ, ಕಾಂಪೌಡ್ ವಾಲ್ಗಳಿಗೆ ಹಾಕಿದ ಕಬ್ಬಿಣದ ಗ್ರಿಲ್ನ ಜನ ಹೊತ್ತೊಯ್ದಿದ್ದಾರೆ.
ಬಳ್ಳಾರಿ-ಬೆಳಗಲ್ಲು ರಸ್ತೆಯಲ್ಲಿರುವ ಜಿ ಸ್ಕ್ವೇರ್ ಲೇಔಟ್ಗೆ ಸೇರಿದ ಜಾಗದಲ್ಲಿ ಸರ್ಕಾರಿ ಬಂಡಿ ದಾರಿ ಹಾಗೂ ಹಳ್ಳದ ಜಾಗವನ್ನು ಒತ್ತುವರಿ ಮಾಡಲಾಗಿತ್ತು. ಇದನ್ನು ಮನಗಂಡ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಾಗವನ್ನು ತನ್ನ ವಶಕ್ಕೆ ಪಡೆದಿದ್ದಾರೆ.
ಈ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆಗಳು ಹಾಗೂ ಜಿ ಸ್ಕ್ವೇರ್ ಸಂಸ್ಥೆಗೆ ಸೇರಿದ ಇತರ ತಾತ್ಕಾಲಿಕ ನಿರ್ಮಾಣಗಳನ್ನು ಜೆಸಿಬಿ ಯಂತ್ರಗಳ ಮೂಲಕ ನೆಲಸಮಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಭಾರಿ ಪೊಲೀಸ್ ಭದ್ರತೆಯೊಂದಿಗೆ ಈ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.
ಸರ್ಕಾರಿ ಜಮೀನು ಒತ್ತುವರಿಯಾದಲ್ಲಿ ಮುಲಾಜಿಲ್ಲದೇ ತೆರವುಗೊಳಿಸುವಂತೆ ಜಿಲ್ಲಾಡಳಿದ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಎಕರೆ ಜಾಗ ಒತ್ತುವರಿ ತೆರವುಗೊಳಿಸಲಾಗಿದೆ. ಒತ್ತುವರಿ ತೆರವು ಬಳಿಕ ಈ ಜಾಗದಲ್ಲಿ ಸರ್ಕಾರಿ ಸ್ವತ್ತು ಎಂದು ಬೋರ್ಡ್ ಅಳವಡಿಸಲಾಗಿದೆ. ಅಲ್ಲದೇ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.

