ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರಿಗೆ ಸಾಂತ್ವನ ಹೇಳಲು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ ಪುರಕ್ಕೆ ಅಭಿಷೇಕ್ ಬ್ಯಾನರ್ಜಿ ಭೇಟಿ ನೀಡಿದ್ದ ವೇಳೆ ಶುಕ್ರವಾರ ಅವರ ಮೇಲೆ ದುಷ್ಕರ್ಮಿಗಳು ಕಲ್ಲು, ಮೊಟ್ಟೆಗಳಿಂದ ದಾಳಿ ನಡೆಸಿದ್ದರು. ಅಲ್ಲದೇ ಕಳ್ಳ ಕಳ್ಳ ಎಂದು ಘೋಷಣೆ ಕೂಗಿದ್ದರು. ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಅಭಿಷೇಕ್ ಅವರಿಗೆ ಹೆಲ್ಮೆಟ್ ಹಾಕಿ ದುಷ್ಕರ್ಮಿಗಳಿಂದ ರಕ್ಷಿಸಿದ್ದರು.
ಘಟನಾ ಸ್ಥಳದಲ್ಲಿನ ಸಿಸಿಟಿವಿ ವಿಡಿಯೋಗಳನ್ನು ಆಧರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ದುಷ್ಕರ್ಮಿಗಳು ಅಭಿಷೇಕ್ ಬ್ಯಾನರ್ಜಿ ಅವರನ್ನು ಒದೆಯುವ, ದೈಹಿಕ ಹಲ್ಲೆನಡೆಸುವ ಯತ್ನ ನಡೆಸಿದ್ದರು, ಭದ್ರತಾಅ ಸಿಬ್ಬಂದಿ ಮಧ್ಯಪ್ರವೇಶದಿಂದ ಅನಾಹುತ ತಪ್ಪಿದೆ. ಹಲ್ಲೆ ಬಗ್ಗೆ ಅಭಿಷೇಕ್ ಬ್ಯಾನರ್ಜಿ ಅವರಾಗಲಿ, ಟಿಎಂಸಿಯಾಗಲಿ ಯಾವುದೇ ದೂರು ನೀಡಿಲ್ಲ. ಹಾಗಾಗಿ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಖನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್ ಬ್ಯಾನರ್ಜಿ, ಈ ದಾಳಿ ಹಿಂದೆ ಬಿಜೆಪಿ ಕೈವಾಡವಿದೆ. ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.

