ಬೆಂಗಳೂರು: ಆಂಧ್ರಪ್ರದೇಶದ ಪೊಲೀಸರ ಸೋಗಿನಲ್ಲಿ ಬಂದು ಶಾಸಕರೊಬ್ಬರ ಕಡೆಯವರು ಬೆಂಗಳೂರಿನ ಖ್ಯಾತ ಉದ್ಯಮಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಉದ್ಯಮಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ಉದ್ಯಮಿ ಹಾಗೂ ಬಿಜೆಪಿ ಮುಖಂಡ ರವಿಪ್ರಕಾಶ್ ಅವರನ್ನು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮೈದುಕೂರು ಠಾಣೆ ಪೊಲೀಸರು ಎಂದು ಹೇಳಿಕೊಂಡಿ ಬಂದವರು ಆ.೩೦ರಂದು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಆದರೆ ಬಂಧಿಸಲೆಂದು ಬಂದವರು ಪೊಲೀಸರೇ ಅಲ್ಲ, ಆಂಧ್ರದ ಮೈದುಕೂರು ಶಾಸಕನ ಕಡೆಯವರೆಂದು ಉದ್ಯಮಿಯ ಕುಟುಂಬ ಆರೋಪಿಸಿದೆ.
ಈ ಹಿನ್ನೆಲೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ರವಿಪ್ರಕಾಶ್ ಕುಟುಂಬದವರು ದೂರು ನೀಡಿದ್ದು, ಶಾಸಕ ಪುಟ್ಟ ಸುಧಾಕರ್ ಸೇರಿಂದಂತೆ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ರವಿಪ್ರಕಾಶ್ 300ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಸಂಗ್ರಹ ಹೊಂದಿರುವ ಖ್ಯಾತ ಉದ್ಯಮಿಯಾಗಿದ್ದಾರೆ. ಮೈದುಕೂರು ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ರವಿಪ್ರಕಾಶ್ 5ನೇ ಆರೋಪಿಯಾಗಿದ್ದು, ಅದರನ್ವಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆನ್ನಲಾಗಿದೆ. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಉದ್ಯಮಿಯನ್ನು ಕರೆದೊಯ್ಯಲಾಗಿದ್ದು, ಇದರ ಹಿಂದೆ ಆಂಧ್ರಪ್ರದೇಶದ ಮೈದುಕೂರು ಶಾಸಕ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ಪುಟ್ಟ ಸುಧಾಕರ್ ಅವರ ರಾಜಕೀಯ ಪ್ರಭಾವವಿದೆ ಎಂದು ರವಿಪ್ರಕಾಶ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಆರ್.ಆರ್.ನಗರದಲ್ಲಿ ರವಿಪ್ರಕಾಶ್ ಅವರಿಗೆ ಸೇರಿದ 14 ಎಕರೆ ಬೆಲೆಬಾಳುವ ಜಮೀನಿದ್ದು, ಈ ಜಮೀನಿನ ವಿಚಾರವಾಗಿ ರವಿಪ್ರಕಾಶ್ ಮತ್ತು ಶಾಸಕ ಪುಟ್ಟ ಸುಧಾಕರ್ ನಡುವೆ ಕೋರ್ಟ್‌ನಲ್ಲಿ ದೀರ್ಘಕಾಲದ ವ್ಯಾಜ್ಯ ನಡೆಯುತ್ತಿದೆ. ಕಳೆದ ತಿಂಗಳು ಸುಧಾಕರ್ ಅವರು ಜಮೀನಿನ ಬಳಿ ಬಂದು ಬಲವಂತವಾಗಿ ಒಳನುಗ್ಗಲು ಯತ್ನಿಸಿ ಗಲಾಟೆ ಮಾಡಿದ್ದರೆಂದು ರವಿಪ್ರಕಾಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ದ್ವೇಷದಿಂದ ಈ ರೀತಿ ಹೆದರಿಸುವ ತಂತ್ರ ಹೆಣೆಯಲಾಗಿದೆ ಎಂದು ರವಿ ಪ್ರಕಾಶ್ ಪುತ್ರಿ ದೂರಿದ್ದಾರೆ. ವಾಹನದಲ್ಲಿ ಉದ್ಯಮಿಯನ್ನು ಕರೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಉದ್ಯಮಿಯ ಕುಟುಂಬಸ್ಥರ ದೂರಿನನ್ವಯ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ಪುಟ್ಟ ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ.

