ನವದೆಹಲಿ: ಈ ಬಾರಿ ಅವಧಿಗೂ ಮುನ್ನವೇ ಕೇರಳಂಗೆ ಮುಂಗಾರು ಪ್ರವೇಶಿಸಲಿದ್ದು, ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಜೂನ್ 26ರಂದು ಮುಂಗಾರು ಅಪ್ಪಳಿಸಲಿದೆ ಎನ್ನಲಾಗಿತ್ತು. ಆದರೆ ವಿಳಂಬವಾಗಿದ್ದು, ಜೂನ್ 4ರ ವೇಳೆಗೆ ಕೇರಳಂಗೆ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾರತದ ಕೃಷಿ ವಲಯದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಜೂನ್ 4ರಂದು ಅಧಿಕೃತವಾಗಿ ಕೇರಳಂ ಕರಾವಳಿಯನ್ನು ಪ್ರವೇಶಿಸಲಿದೆ. ಮುಂಗಾರು ಪ್ರವೇಶಿಸುತ್ತಿದ್ದಂತೆ ಕೇರಳಂದಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ಕೇರಳಂ ರಾಜ್ಯದ ಹಲವು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಮುಂಗಾರು ಮಾರುತಗಳು ತೀವ್ರ ವೇಗವನ್ನು ಪಡೆದುಕೊಂಡಿದ್ದು, ಜೂನ್ 4ರಂದು ಕೇರಳಂದ ಭೂಭಾಗವನ್ನು ಮುಟ್ಟಲಿವೆ. ಇದರ ಪ್ರಭಾವದಿಂದಾಗಿ ಈಗಾಗಲೇ ಕೇರಳಂದ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ.
ಕೇರಳಂನ ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ತ್ರಿಶೂರ್, ಪತ್ತನಂತಿಟ್ಟ, ಎರ್ನಾಕುಲಂ ಮತ್ತು ಇಡುಕ್ಕಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲ್ರೆಯಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಸಮುದ್ರದಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಅಲೆಗಳ ಅಬ್ಬರ ಜೋರಾಗಲಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ವರ್ಷ ‘ಎಲ್ ನಿನೋ’ ಪ್ರಭಾವ ಇರುವುದರಿಂದ ದೇಶಾದ್ಯಂತ ಒಟ್ಟಾರೆ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಇರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಕೇರಳಂ ಪ್ರವೇಶಿಸಿದ ಕೆಲವು ದಿನಗಳಲ್ಲಿ ಮುಂಗಾರು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಪ್ರವೇಶಿಸಲಿದೆ. ಕೇರಳಂಗೆ ಮುಂಗಾರು ಪ್ರವೇಶಿಸಿದ 3ರಿಂದ 5 ದಿನಗಳ ಒಳಗಾಗಿ ಅಂದರೆ ಜೂನ್ 7 ಅಥವಾ 8ರ ವೇಳೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಭಾಗಗಳಿಗೆ ಮುಂಗಾರು ಮಾರುತಗಳು ಅಪ್ಪಳಿಸಲಿವೆ. ಜೂನ್ 7ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆಯಾರಂಭವಾಗಲಿದೆ.

