HomeKarnatakaಮುಂಗಾರು ಪ್ರಾರಂಭ : ಕೃಷಿ ಇಲಾಖೆಯಿಂದ ರೈತರಿಗೆ ಮಹತ್ವದ ಬೆಳೆ ಸಲಹೆ

ಮುಂಗಾರು ಪ್ರಾರಂಭ : ಕೃಷಿ ಇಲಾಖೆಯಿಂದ ರೈತರಿಗೆ ಮಹತ್ವದ ಬೆಳೆ ಸಲಹೆ

ಶಿವಮೊಗ್ಗ : 2026 ರ ಮುಂಗಾರು ಜಿಲ್ಲೆಯಾದ್ಯಂತ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಪ್ರಮುಖ ಕೃಷಿ ಬೆಳೆಗಳಾದ ಭತ್ತ ಮತ್ತು ಮುಸುಕಿನ ಜೋಳ ಹಾಗೂ ಅಲ್ಪ ಪ್ರಮಾಣದಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಈ ಸಮಯದಲ್ಲಿ ಜಿಲ್ಲೆಯ ರೈತರಿಗೆ ಪ್ರಮುಖವಾಗಿ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳ ದಾಸ್ತಾನುಗೊಳಿಸಲಾಗಿದ್ದು ಬಿತ್ತನೆಗೆ ಮುನ್ನ ರೈತರು ಈ ಕೆಳಕಂಡ ಕ್ರಮಗಳನ್ನು ಅನುಸರಿಸುವಂತೆ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿರುತ್ತಾರೆ.

ಬೆಳೆಗಳಿಗೆ ಅನುಗುಣವಾಗಿ ಕ್ರಮಬದ್ಧವಾಗಿ ಭೂಮಿ ಸಿದ್ಧತೆ ಕೈಗೊಳ್ಳುವುದು. ಬೀಜ, ಗೊಬ್ಬರ, ಕೀಟನಾಶಕ ಅಥವಾ ಇನ್ನತರೆ ಯಾವುದೇ ಕೃಷಿ ಪರಿಕರಗಳನ್ನು ಅಧೀಕೃತ ಮಾರಾಟ ಮಳಿಗೆಗಳಿಂದಲೇ ಖರೀದಿಸುವುದು. 2026 ರ ಮುಂಗಾರಿನಲ್ಲಿ ಹವಾಮಾನ ವರದಿಗಳ ಮುನ್ಸೂಚನೆಯಂತೆ ಎಲ್-ನಿನೋ ಕಾರಣದಿಂದ ವಾಡಿಕೆಗಿಂತ ಮಳೆಯ ಪ್ರಮಾಣ ಶೇ.90 ರಿಂದ 92 ರಷ್ಟು ಕಡಿಮೆಯಾಗುವ ಸಾಧ್ಯತೆಯಿದ್ದು ರೈತರು ಹವಾಮಾನ ವರದಿಗಳನ್ನು ಗಮನಿಸಿ ಬಿತ್ತನೆ ಹಾಗೂ ಇತರೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದು.

ಬೀಜಗಳನ್ನು ಬಿತ್ತುವ ಮುನ್ನ ಬೆಳೆಗನುಣವಾಗಿ ಸಾಕಷ್ಟು ತೇವಾಂಶವಿರುವುದನ್ನು ಖಾತರಿ ಪಡಿಸಿಕೊಂಡು ಬಿತ್ತನೆ ಮಾಡುವುದು. ತೇವಾಂಶ ಕಡಿಮೆ ಇದ್ದಲ್ಲಿ ಬೀಜವು ಮೊಳಕೆ ಬಂದು ಮಣ್ಣಿನಿಂದ ಹೊರಗೆ ಬರಲಾಗದೇ ಭೂಮಿಯಲ್ಲಿಯೇ ಮುರುಟಿ ಹೋಗುವ ಸಾಧ್ಯತೆಯಿರುತ್ತದೆ. ಜಿಲ್ಲೆಯಲ್ಲಿ ರೈತರು ಬೆಳೆಗಳಿಗೆ ಅತಿಯಾದ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದು, ಸಾಮಾನ್ಯವಾಗಿ ಸಾರಜನಕ (ಯೂರಿಯಾ) ಹಾಗೂ ರಂಜಕಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಹೆಚ್ಚಾಗಿ ಮಾಡುತ್ತಿದ್ದು ಈ ರಸಗೊಬ್ಬರದಲ್ಲಿ ಪೊಟ್ಯಾಷ್ ಅಂಶವಿರುವುದಿಲ್ಲ. ಪೊಟ್ಯಾಷ್ ಪೋಷಕಾಂಶವು ಬೆಳೆಗಳಿಗೆ ರೋಗ ಹಾಗೂ ಕೀಟ ಬಾಧೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಕಾಳುಗಳನ್ನು ಸದೃಢಗೊಳಿಸಿ ಹೆಚ್ಚು ತೂಕ ಬರುವಂತೆ ಮಾಡುತ್ತದೆ. ಇದರಿಂದ ಇಳುವರಿಯು ಹೆಚ್ಚಾಗುವುದು. ಕಾರಣ ರೈತರು ಬಿತ್ತನೆ ಸಮಯದಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಪೋಷಕಾಂಶಗಳನ್ನು ಹೊಂದಿರುವ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು 10:26:26, 15:15:15, 12:36:16, 14:35:14, 17:17:17, 14:28:14, 19:19:19, 20:10:10 ರಂತೆ ಬಳಸುವುದು ಸೂಕ್ತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಲ್ಲದೇ ಬೆಳೆಗಳ ಬೆಳವಣಿಗೆ ಹಂತದಲ್ಲಿ ರೈತರು ಯಥೇಚ್ಛವಾಗಿ ಸಾರಜನಕ (ಯೂರಿಯಾ) ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಬಳಸುತ್ತಿದ್ದು, ಇದರಿಂದ ಬೆಳೆಗಳಿಗೆ ರೋಗ ಮತ್ತು ಕೀಟ ಬಾಧೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತದೆ ಕಾರಣ, ರೈತರು ಹವಾಮಾನ ಆಧರಿಸಿ ಶಿಫಾರಸ್ಸು, ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಸಲು ಕ್ರಮವಹಿಸುವುದು. ಮೇಲು ಗೊಬ್ಬರ ಬಳಸುವಾಗ ಹರಳು ರೂಪದ ಯೂರಿಯಾ ಗೊಬ್ಬರದ ಬದಲು ನವೀನ ತಾಂತ್ರಕತೆಯ, ಸಿಂಪರಣೆ ಮಾಡಬಹುದಾದ, ದ್ರವರೂಪದ ನ್ಯಾನೊ ಪ್ಲಸ್ ಯೂರಿಯಾ ಅಥವಾ ನ್ಯಾನೋ ಡಿ.ಎ.ಪಿ. ಗಳನ್ನು ಬಳಸುವುದು. ಇವುಗಳನ್ನು ಬಳಸುವುದರಿಂದ ನೇರವಾಗಿ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಬೆಳೆಗಳು ನೇರವಾಗಿ ಪೋಷಕಾಂಶಗಳನ್ನು ಹೀರಿಕೊಂಡು ಶೀಘ್ರವಾಗಿ ಬೆಳೆಯುತ್ತವೆ ಹಾಗೂ ಪರಿಸರಕ್ಕೆ ಆಗುವ ಹಾನಿ ಕಡಿಮೆ ಮಾಡಬಹುದು.

ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ಅಮೋನಿಯಮ್ ಸಲ್ಪೇಟ್ ಗೊಬ್ಬರ ಹಾಗೂ ಡಿ.ಎ.ಪಿ ಗೊಬ್ಬರಕ್ಕೆ (ರಂಜಕ) ಪರ್ಯಾಯವಾಗಿ ಸಿಂಗಲ್ ಸೂಪರ್ ಫಾಸ್ಪೇಟ್ ಅಥವಾ ಟ್ರಿಪಲ್ ಸೂಪರ್ ಫಾಸ್ಪೇಟ್ ಬಳಸುವುದು. ಭೂಮಿಗೆ Fermented Organic Manure/Liquid Fermented Organic Manure ಅಥವಾ ಇನ್ನತರೆ ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸುವುದು. ಜೈವಿಕ ಗೊಬ್ಬರಗಳ ಬಳಕೆ ಹಾಗೂ ವಿವೇಚನಾತ್ಮಕ ರಸಗೊಬ್ಬರಗಳ ಬಳಕೆಗೆ ಉತ್ತೇಜಿಸುವುದು. ಈಗಾಗಲೇ ಮಣ್ಣಿನಲ್ಲಿ ದೊರೆಯದ ಸ್ಥಿತಿಯಲ್ಲಿರುವ ರಂಜಕವನ್ನು ಬೆಳೆಗಳಿಗೆ ಲಭ್ಯವಾಗುವಂತೆ ಮಾಡುವ ರಂಜಕ ಕರಗಿಸುವ ಹಾಗೂ ಮೈಕೋರೈಝಾ ಜೈವಿಕ ಗೊಬ್ಬರಗಳನ್ನು ಸೇರಿಸಲು ಕ್ರಮವಹಿಸುವುದು. ಅಧಿಕೃತ ಮಾರಾಟಗಾರರಿಂದ ಬಿಲ್ ಪಡೆದು ಕೃಷಿ ಪರಿಕರಗಳನ್ನು ಖರೀದಿಸುವುದು ಹಾಗೂ ನಕಲಿ ಬಿತ್ರನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟ ಕಂಡುಬಂದಲ್ಲಿ ಕೂಡಲೇ ಇಲಾಖೆಗೆ ದೂರು ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಭೇಟಿ ಮಾಡುವುದು ಎಂದು ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular