ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟವು ಹಸಿರು ನಿಶಾನೆ ತೋರಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಕೇಂದ್ರ ಸರ್ಕಾರ ಈ ಮಹತ್ವದ ರಾಜಕೀಯ ತೀರ್ಮಾನ ಕೈಗೊಂಡಿದೆ.
ಹೌದು. ಜೂನ್ 2024 ರಲ್ಲಿ ಕೇರಳ ವಿಧಾನಸಭೆಯು ರಾಜ್ಯದ ಹೆಸರನ್ನು ಬದಲಾಯಿಸುವಂತೆ ಕೋರಿ ಅವಿರೋಧವಾಗಿ ನಿರ್ಣಯ ಅಂಗೀಕರಿಸಿತ್ತು. ಇದು ರಾಜ್ಯದ ಮೂಲ ಸಾಂಸ್ಕೃತಿಕ ಮತ್ತು ಭಾಷಾ ಪರಂಪರೆಯನ್ನು ಮರುಸ್ಥಾಪಿಸುವ ದೀರ್ಘಕಾಲದ ಬೇಡಿಕೆಯಾಗಿತ್ತು.ಕೇಂದ್ರ ಸಚಿವ ಸಂಪುಟದ ಅನುಮೋದನೆಯ ನಂತರ, ಸಂವಿಧಾನದ ವಿಧಿ 3ರ (Article 3) ಅಡಿಯಲ್ಲಿ ರಾಷ್ಟ್ರಪತಿಗಳು ಈಗ ‘ಕೇರಳ (ಹೆಸರು ಬದಲಾವಣೆ) ವಿಧೇಯಕ, 2026’ ಅನ್ನು ಕೇರಳ ರಾಜ್ಯ ಶಾಸಕಾಂಗದ ಅಭಿಪ್ರಾಯಕ್ಕಾಗಿ ಕಳುಹಿಸಲಿದ್ದಾರೆ.
ಮುಂದಿನ ಹಂತ: ರಾಜ್ಯ ವಿಧಾನಸಭೆಯು ತನ್ನ ಅಭಿಪ್ರಾಯ ತಿಳಿಸಿದ ನಂತರ, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಲು ರಾಷ್ಟ್ರಪತಿಗಳ ಶಿಫಾರಸನ್ನು ಕೋರಲಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ದೊರೆತ ನಂತರ ಹೆಸರು ಬದಲಾವಣೆ ಅಧಿಕೃತಗೊಳ್ಳಲಿದೆ.
ಹಳೆಯ ಅಡೆತಡೆ ನಿವಾರಣೆ: 2023 ರಲ್ಲಿ ಸಲ್ಲಿಸಲಾಗಿದ್ದ ಇಂತಹದ್ದೇ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯವು ತಾಂತ್ರಿಕ ಕಾರಣಗಳಿಗಾಗಿ ವಾಪಸ್ ಕಳುಹಿಸಿತ್ತು. ಈಗ ಪರಿಷ್ಕೃತ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿರುವುದು ದೊಡ್ಡ ಅಡೆತಡೆಯನ್ನು ನಿವಾರಿಸಿದಂತಾಗಿದೆ.’ಕೇರಳ’ ಎಂಬುದು ಬ್ರಿಟಿಷರ ಕಾಲದ ಹೆಸರಾಗಿದ್ದು, ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ‘ಕೇರಳಂ’ ಎಂದೇ ಕರೆಯಲಾಗುತ್ತದೆ. ಈಗ ಅಧಿಕೃತ ದಾಖಲೆಗಳಲ್ಲೂ ಮಲಯಾಳಂ ಸಂಸ್ಕೃತಿಯ ಬಿಂಬಿಸುವ ಹೆಸರೇ ಬರಲಿದೆ.ಕೇರಳ ಸರ್ಕಾರವು ತನ್ನ ರಾಜ್ಯದ ಹೆಸರನ್ನು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿತ್ತು.
ಪಿಣರಾಯಿ ವಿಜಯನ್ ಸ್ಪಷ್ಟನೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿ, “ರಾಜ್ಯದ ಮೂಲ ಹೆಸರು ‘ಕೇರಳಂ’ ಎಂದೇ ಇತ್ತು. ಆದರೆ ಬ್ರಿಟಿಷರ ಆಳ್ವಿಕೆಯಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಅದನ್ನು ‘ಕೇರಳ’ ಎಂದು ಬದಲಿಸಲಾಗಿತ್ತು. ಈಗ ಅದನ್ನು ಸರಿಪಡಿಸಿ ರಾಜ್ಯದ ಸಂಸ್ಕೃತಿಗೆ ಅನುಗುಣವಾಗಿ ಮರುಸ್ಥಾಪಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಹೆಸರು ಬದಲಾವಣೆಯ ಉದ್ದೇಶ: ಬ್ರಿಟಿಷರ ಪ್ರಭಾವದಿಂದ ಬದಲಾಗಿದ್ದ ಹೆಸರನ್ನು ಕೈಬಿಟ್ಟು, ಮಲಯಾಳಂ ಭಾಷೆ ಮತ್ತು ಸಂಸ್ಕೃತಿಗೆ ಹತ್ತಿರವಿರುವ ಮೂಲ ಹೆಸರನ್ನು ಅಧಿಕೃತ ದಾಖಲೆಗಳಲ್ಲಿ ಅಳವಡಿಸುವುದು ಈ ಮರುನಾಮಕರಣದ ಮುಖ್ಯ ಉದ್ದೇಶವಾಗಿದೆ.

