ಮೈಸೂರು ಸಮೀಪದ ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಫಿಲೇಚರ್ ಫ್ಯಾಕ್ಟರಿ ಆವರಣದ 5 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಇಂದು ಕಾರ್ಖನೆಯ ಸಿಬ್ಬಂದಿಗಳು ಪ್ರಸ್ತಾವನೆ ಕೈಬಿಡಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ರಾಜಕೀಯ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಈ ಕುರಿತು ಪ್ರತಾಪ್ ಸಿಂಹ ಪೋಸ್ಟ್ ಹಾಕಿದ್ದು, ಟಿ. ನರಸೀಪುರದ ಕೆಎಸ್‌ಐಸಿ ಸಿಲ್ಕ್ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವುದನ್ನು ವಿರೋಧಿಸಿ ಕಾರ್ಖಾನೆ ಸಿಬ್ಬಂದಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಲಾಯಿತು ಎಂದು ಹೇಳಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಈ ವಿಚಾರದ ಕುರಿತು ಪೋಸ್ಟ್ ಹಾಕಿದ್ದು,’ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಮೈಸೂರು ಪರಂಪರೆಯ ಮೇಲೆ ಅದೇಕೋ ಮೊದಲಿನಿಂದಲೂ ಕಾಂಗ್ರೆಸ್ ಸರ್ಕಾರ ತೀವ್ರ ಅಸಡ್ಡೆಯ ದೃಷ್ಠಿ ಬೀರುತ್ತಾ ಬಂದಿದೆ. ಮೈಸೂರು ಅರಮನೆ ಸೇರಿದಂತೆ ಪಾರಂಪರಿಕ ಕಟ್ಟಡಗಳ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ಬಹುಬೇಡಿಕೆಯಲ್ಲಿರುವ ಮೈಸೂರು ಸಿಲ್ಕ್ ಉತ್ಪನ್ನಗಳ ತಯಾರಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕುಗ್ಗಿಸಿದೆ’ ಎಂದು ದೂರಿದ್ದಾರೆ.
‘ಅದರ ಮುಂದುವರಿದ ಭಾಗವಾಗಿ 1912 ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಟಿ. ನರಸೀಪುರದ ಸಿಲ್ಕ್ ಫಿಲೇಚರ್ ಫ್ಯಾಕ್ಟರಿಯನ್ನು ಮುಚ್ಚಿಸಲು ಹೊರಟು ಅಲ್ಲಿರುವ ಅಮೂಲ್ಯ ವೃಕ್ಷಗಳನ್ನು ಹನನ ಮಾಡಿ, ನೂರಾರು ಕಾರ್ಮಿಕರ ಬದುಕನ್ನು ಬೀದಿಗೆ ತಳ್ಳಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿರುವ ಕ್ರಮ ಅತ್ಯಂತ ಖಂಡನೀಯ’ ಎಂದು ಹೇಳಿದ್ದಾರೆ.
‘ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಸ್ಥಳೀಯರ ವಿರೋಧ ಹಾಗೂ ಪರಿಸರ ಪ್ರೇಮಿಗಳ ಆಕ್ರೋಶ ಎದುರಿಸಲು ಸಿದ್ಧವಾಗಲಿ. ಈ ಸಂಬಂಧ ನಡೆಯುವ ಹೋರಾಟವನ್ನು ಬಿಜೆಪಿ ಕರ್ನಾಟಕ ಬೆಂಬಲಿಸಲಿದೆ’ ಎಂದು ಎಚ್ಚರಿಸಿದ್ದಾರೆ.

