ಕೊಚ್ಚಿಯ ತೃಕ್ಕಾಕರದಲ್ಲಿರುವ ಭಾರತ್ ಮಾತಾ ಕಾಲೇಜಿನ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರ ಫೋಟೋ ಮತ್ತು ವೀಡಿಯೋಗಳನ್ನು ಅಶ್ಲೀಲವಾಗಿ ಮೋರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಅದೇ ಕಾಲೇಜಿನ ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಶ್ರೀಹರಿ ಎಂಬಾತನನ್ನು ತೃಕ್ಕಾಕರ ಪೊಲೀಸರು ಬಂಧಿಸಿದ್ದಾರೆ.
ಕಾಲೇಜು ಪ್ರಿನ್ಸಿಪಾಲ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆತನ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಧನಗಳನ್ನು ತಪಾಸಣೆಗೊಳಪಡಿಸಿದಾಗ ಸಹಪಾಠಿಗಳು ಹಾಗೂ ಶಿಕ್ಷಕಿಯರ ಸಾಲು ಸಾಲು ಮೋರ್ಫ್ ಮಾಡಿದ ಅಶ್ಲೀಲ ಚಿತ್ರಗಳು ಮತ್ತು ವೀಡಿಯೋಗಳು ಪತ್ತೆಯಾಗಿವೆ.
ತನಿಖೆಯ ವೇಳೆ ಆರೋಪಿಯು ಟೆಲಿಗ್ರಾಂ ಗ್ರೂಪ್ ಒಂದರ ಸಕ್ರಿಯ ಸದಸ್ಯನಾಗಿದ್ದು, ಅಲ್ಲಿ ಈ ಅಶ್ಲೀಲ ವಿಷಯಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಮೀಡಿಯಾ ಸೆಲ್‌ನಲ್ಲಿದ್ದ ಈತ, 2025 ರಿಂದಲೂ ಕಾರ್ಯಕ್ರಮಗಳ ನೆಪದಲ್ಲಿ ಎಲ್ಲರ ಫೋಟೋ, ವೀಡಿಯೋಗಳನ್ನು ತೆಗೆದುಕೊಂಡು ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಂ ಗ್ರೂಪ್‌ಗಳಿಗೆ ಹಂಚಿಕೊಳ್ಳುತ್ತಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮೋರ್ಫ್ ಮಾಡಿದ ಫೋಟೋಗಳನ್ನು ನೀಡಿ ಹಣ ಸಂಪಾದಿಸುತ್ತಿದ್ದನೇ ಎಂಬ ಕೋನದಲ್ಲೂ ಪೊಲೀಸರು ಬ್ಯಾಂಕ್ ಖಾತೆಗಳ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಕಾಲೇಜು ಆಡಳಿತ ಮಂಡಳಿ ಆರೋಪಿಯನ್ನು ತಕ್ಷಣವೇ ಕಾಲೇಜಿನಿಂದ ವಜಾಗೊಳಿಸಿದೆ.

