ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ದಾಖಲೆಯ ಗಳಿಕೆ ಮಾಡಿದ ಚಿತ್ರಗಳ ಪಟ್ಟಿಗೆ ಈ ವರ್ಷದ ಮೊದಲಾರ್ಧದಲ್ಲಿ ಕೆಲ ಸಿನಿಮಾಗಳು ಸೇರ್ಪಡೆಯಾಗಿದ್ದು, ಅವುಗಳಲ್ಲಿ ಬಹುತೇಕ ಚಿತ್ರಗಳು ಪಕ್ಕದ ತಮಿಳುನಾಡಿನಿಂದ ಬಂದಿರುವುದು ವಿಶೇಷವೆನಿಸಿದೆ.
ಇನ್ನು ಸದ್ಯ ತಮಿಳುನಾಡಿನಲ್ಲಿ ನಿರ್ದೇಶಕರೇ ನಟರಾಗಿ ನಟಿಸುವ ಟ್ರೆಂಡ್ ಅಬ್ಬರಿಸುತ್ತಿದ್ದು, ಹೀಗೆ ಆಕ್ಷನ್ ಕಟ್ ಹೇಳುವವರೇ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಬಂದಿರುವುದು ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಕೊಮಾಲಿ ಚಿತ್ರವನ್ನು ನಿರ್ದೇಶಿಸಿ ಹೆಸರು ಮಾಡಿದ್ದ ನಿರ್ದೇಶಕ ಪ್ರದೀಪ್ ರಂಗನಾಥನ್ ಲವ್ ಟುಡೇ ಚಿತ್ರದಲ್ಲಿ ತಾನೇ ನಟನಾಗಿ ಎಲ್ಲ ಟೀಕೆಗಳನ್ನು ಬಗ್ಗುಬಡಿದು ಗೆದ್ದು ತೋರಿಸಿದ ಬೆನ್ನಲ್ಲೇ ಟೂರಿಸ್ಟ್ ಫ್ಯಾಮಿಲಿ ಚಿತ್ರದ ಅಭಿಷನ್ ಅದೇ ಹಾದಿಯಲ್ಲಿ ಗೆಲುವನ್ನು ಕಂಡಿದ್ದರು. ಇದೇ ಸಾಲಿಗೆ ಇದೀಗ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಯೂತ್ ಚಿತ್ರದ ನಿರ್ದೇಶಕ ಕೆನ್ ಕರುಣಾಸ್ ಸೇರ್ಪಡೆಗೊಂಡಿದ್ದಾರೆ.
ತಮಿಳಿನ ಅಸುರನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲ ನಟನಾಗಿ ಬಣ್ಣ ಹಚ್ಚಿದ್ದ ಕೆನ್ ಇದೀಗ ತಾನೇ ನಿರ್ದೇಶನ ಮಾಡಿ ನಟನೆಯನ್ನೂ ಸಹ ಮಾಡಿದ್ದು, ಚಿತ್ರಕ್ಕೆ ತಮಿಳುನಾಡು ಸಿನಿ ರಸಿಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಚಿತ್ರದಲ್ಲಿ ನಟನೆ ಮಾತ್ರವಲ್ಲದೇ ಸಾಹಿತ್ಯ, ಗಾಯನವನ್ನೂ ಸಹ ಪ್ರಯತ್ನಿಸಿರುವ 25ರ ಹರೆಯದ ಕೆನ್ ಡಾನ್ಸ್‌ನಲ್ಲೂ ಮೋಡಿ ಮಾಡಿದ್ದಾರೆ. ನಟ, ನಿರ್ದೇಶಕ, ಸಂಗೀತಗಾರ ಕರುಣಾಸ್ ಪುತ್ರನಾದ ಕೆನ್ ಕರುಣಾಸ್ ನೆಪೊ ಕಿಡ್ ಟ್ರೋಲ್‌ಗೆ ಒಳಗಾಗದೇ ಪರಿಪೂರ್ಣ ಪ್ರತಿಭೆ ಎನಿಸಿಕೊಂಡಿರುವುದು ಇದೇ ಕಾರಣಕ್ಕೆ. ಸಕಲಕಲಾವಲ್ಲಭನಾಗಿರುವ ಕೆನ್‌ಗೆ ಸಿನಿಮಾ ಬ್ಯಾಕ್‌ಗ್ರೌಂಡ್ ಇದ್ದರೂ ಸಹ ಚಿತ್ರರಂಗಕ್ಕೆ ನಟ ಹಾಗೂ ನಿರ್ದೇಶಕನಾಗಿ ಪದಾರ್ಪಣೆ ಮಾಡುವ ಹಾದಿ ಸುಲಭವಾಗಿರಲಿಲ್ಲ.
ತಾನು ಹೀಗೆ ನಿರ್ದೇಶನ ಹಾಗೂ ನಟನೆ ಮಾಡಿ ಸಿನಿಮಾವೊಂದನ್ನು ಮಾಡಲಿದ್ದೇನೆ ಎಂದು ಕೆನ್ ಹೇಳಿಕೊಂಡಾಗ ಮನೆಯವರೇ ಗೇಲಿ ಮಾಡಿದ್ದರಂತೆ. ತನ್ನನ್ನು ಯಾರೂ ನಂಬುತ್ತಿಲ್ಲ ಎಂದು ಇದೇ ಕೆನ್ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಬಳಿ ತೆರಳಿ ಸಹಾಯ ಕೋರಿದಾಗ ಅವರು ಬೆನ್ನೆಲುಬಾಗಿ ನಿಂತು ಸ್ಪೂರ್ತಿ ತುಂಬಿದರು ಹಾಗೂ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಸಹಾಯ ಮಾಡಿದರು ಎಂದು ಯಶಸ್ಸಿನ ಬಳಿಕ ಸ್ವತಃ ಕೆನ್ ಬಿಚ್ಚಿಟ್ಟಿದ್ದಾರೆ.
ಅಂದಹಾಗೆ ಕೆನ್ ನಟನೆಯ ಯೂತ್ ಚಿತ್ರ 6 ಕೋಟಿ ಬಜೆಟ್‌ನಲ್ಲಿ ತಯಾರಾಗಿ ಮಾರ್ಚ್ 19ರಂದು ತೆರೆಗೆ ಬಂದಿತ್ತು. ಸದ್ಯ ಚಿತ್ರ 13 ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು 55.70 ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ತಮಿಳಿನಲ್ಲಿ ಬೃಹತ್ ಗೆಲುವು ಸಾಧಿಸಿದ ಬೆನ್ನಲ್ಲೇ ತೆಲುಗಿಗೂ ಸಹ ಡಬ್ ಆಗಿ ಬಿಡುಗಡೆಯಾಗಿರುವ ಈ ಚಿತ್ರ ನೂರು ಕೋಟಿ ಗಡಿ ದಾಟುವ ಎಲ್ಲ ಸಾಧ್ಯತೆಗಳಿವೆ ಎನ್ನುತ್ತಿದ್ದಾರೆ ಸಿನಿ ಪಂಡಿತರು.

