ಚೆನ್ನೈ: ಚಿತ್ರರಂಗದಲ್ಲಿ ನಟಿಯರ ದೈಹಿಕ ಸೌಂದರ್ಯ ಮತ್ತು ತೂಕದ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರು ತಾವು ಚಿತ್ರರಂಗದಲ್ಲಿ ಎದುರಿಸಿದ ಭೀಕರ ‘ಬಾಡಿ ಶೇಮಿಂಗ್’ (Body Shaming), ಹಠಾತ್ ತೂಕ ಇಳಿಕೆ ಮತ್ತು ಅದರ ಸುತ್ತ ಎದ್ದ ವದಂತಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಬರೆಯುವ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಫಿಟ್‌ನೆಸ್ ಜರ್ನಿ ಬಗ್ಗೆ ಮುಕ್ತವಾಗಿ ಮಾತನಾಡಿರುವ ಕೀರ್ತಿ ಸುರೇಶ್, “ನನ್ನ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ನಾನು ಫಿಟ್‌ನೆಸ್ ಅಥವಾ ವರ್ಕೌಟ್‌ಗೆ ಅಷ್ಟಾಗಿ ಮಹತ್ವ ನೀಡಿರಲಿಲ್ಲ. ಆದರೆ, 2018ರಲ್ಲಿ ‘ಮಹಾನಟಿ’ ಸಿನಿಮಾ ಬಿಡುಗಡೆಯಾದ ನಂತರ ನಾನು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದೆ. ತೀವ್ರವಾದ ಕಾರ್ಡಿಯೋ ವರ್ಕೌಟ್ ಮತ್ತು ಹೈ-ಪ್ರೋಟೀನ್, ಲೋ-ಕಾರ್ಬ್ ಆಹಾರ ಪದ್ಧತಿಯನ್ನು ರೂಢಿಸಿಕೊಂಡೆ” ಎಂದು ತಿಳಿಸಿದ್ದಾರೆ.
9 ತಿಂಗಳಲ್ಲಿ 10 ಕೆಜಿ ತೂಕ ಇಳಿಕೆ ಮತ್ತು ವದಂತಿಗಳು: ಈ ಕಠಿಣ ಫಿಟ್‌ನೆಸ್ ದಿನಚರಿಯಿಂದಾಗಿ ಕೀರ್ತಿ ಸುರೇಶ್ ಸುಮಾರು ಒಂಬತ್ತು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದರು. ಅವರ ಈ ಅದ್ಭುತ ಬದಲಾವಣೆಯನ್ನು ಪ್ರಶಂಸಿಸುವ ಬದಲು, ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಕೀರ್ತಿ ಸುರೇಶ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಅಷ್ಟೇ ಅಲ್ಲದೆ, ಅವರು ತುಂಬಾ ತೆಳ್ಳಗಾಗಿದ್ದಾರೆ, ನಿಶ್ಯಕ್ತರಾಗಿ ಕಾಣುತ್ತಿದ್ದಾರೆ ಎಂದು ಜನರು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೀರ್ತಿ, “ನಾನು ಯಾವಾಗಲೂ ಎಲ್ಲವನ್ನೂ ನ್ಯಾಚುರಲ್ ಆಗಿಯೇ ಇಟ್ಟುಕೊಳ್ಳಲು ಬಯಸುತ್ತೇನೆ” ಎಂದು ಹೇಳುವ ಮೂಲಕ ಸರ್ಜರಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಸಮಾಜದ ದ್ವಂದ್ವ ನಿಲುವಿಗೆ ಪ್ರಶ್ನೆ: ಮಹಿಳೆಯರ ದೈಹಿಕ ಸೌಂದರ್ಯದ ಬಗ್ಗೆ ಸಮಾಜ ಹೊಂದಿರುವ ಬದಲಾಗುವ ಮಾನದಂಡಗಳ ಬಗ್ಗೆ ಕೀರ್ತಿ ಸುರೇಶ್ ತೀವ್ರ ಬೇಸರ ಹೊರಹಾಕಿದ್ದಾರೆ. “ಮಹಿಳೆಯರು ಯಾವುದೇ ರೂಪದಲ್ಲಿದ್ದರೂ ಜನರು ಅವರನ್ನು ಟೀಕಿಸುತ್ತಾರೆ. ಸ್ವಲ್ಪ ದಪ್ಪಗಿದ್ದರೆ ಫಿಟ್ ಆಗಲು ಹೇಳುತ್ತಾರೆ, ಅದೇ ಕಷ್ಟಪಟ್ಟು ಸಣ್ಣಗಾದರೆ ‘ಮೊದಲೇ ಚೆನ್ನಾಗಿ ಕಾಣುತ್ತಿದ್ದಿರಿ’ ಎಂದು ರಾಗ ಎಳೆಯುತ್ತಾರೆ” ಎಂದು ಅವರು ಬರೆದುಕೊಂಡಿದ್ದಾರೆ.
ಯೋಗದ ಮೂಲಕ ನೆಮ್ಮದಿ ಕಂಡುಕೊಂಡ ನಟಿ: ಲಾಕ್‌ಡೌನ್ ಸಮಯದಲ್ಲಿ ತಮಗೆ ಯೋಗದ ಪರಿಚಯವಾಯಿತು ಎಂದು ತಿಳಿಸಿರುವ ಕೀರ್ತಿ ಸುರೇಶ್, ಯೋಗವು ತಮಗೆ ದೈಹಿಕವಾಗಿ ಬಲ ತುಂಬಿದ್ದಲ್ಲದೆ ಮಾನಸಿಕವಾಗಿ ಶಾಂತಿ ನೀಡಿತು ಎಂದಿದ್ದಾರೆ. ಪ್ರಸ್ತುತ ತಾವು ಕಠಿಣ ವರ್ಕೌಟ್‌ಗಳಿಂದ ದೂರವಿದ್ದು, ಯೋಗ, ಸ್ಟ್ರೆಂತ್ ಟ್ರೈನಿಂಗ್ ಮತ್ತು ಅನಿಮಲ್ ಫ್ಲೋ ವರ್ಕೌಟ್‌ಗಳ ಮೂಲಕ ಸಮತೋಲಿತ ಜೀವನಶೈಲಿಯನ್ನು ಮುನ್ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಾವು ಕೆಲವು ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಿದ ಕಾರಣ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ ಎಂದು ಒಪ್ಪಿಕೊಂಡಿರುವ ಕೀರ್ತಿ, ಎಷ್ಟೇ ಕಷ್ಟ ಬಂದರೂ ಮುನ್ನಡೆಯುವುದನ್ನು ನಿಲ್ಲಿಸುವುದಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾಹ್ಯ ಸೌಂದರ್ಯಕ್ಕೆ ಅತಿಯಾದ ಮಹತ್ವ ನೀಡುವ ಚಿತ್ರರಂಗದಲ್ಲಿ, ಕೀರ್ತಿ ಸುರೇಶ್ ಅವರ ಈ ಪ್ರಾಮಾಣಿಕ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

