ಬೆಂಗಳೂರು: ಇತ್ತೀಚೆಗೆ ರಾಮನಗರದ ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ತನಿಖೆ ತೀವ್ರಗೊಳೀಸಿದ್ದು, ೬ ರಾಜ್ಯಗಳ ಮೇಲೆ ದಾಳಿ ನಡೆಸಿದ್ದಾರೆ.
ಕರ್ನಾಟಕದ ಎಸ್ಐಟಿ ಅಧಿಕಾರಿಗಳು ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ಆರು ರಾಜ್ಯಗಳ 10 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿವೆ. ಕರ್ನಾಟಕ, ಹಿಮಾಚಲ ಪ್ರದೇಶ, ಹರಿಯಾಣ, ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದ ಮುಂಬೈ ಹಾಗೂ ತೆಲಂಗಾಣದಲ್ಲಿ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 80ರಿಂದ 100 ಅಧಿಕಾರಿಗಳ ತಂಡ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು, ನಕಲಿ ಫಾರ್ಮ್ಗಳ ಕಚೇರಿಗಳು, ಔಷಧ ಸಂಗ್ರಹ ಸ್ಥಳಗಳು ಹಾಗೂ ಜಾಲಕ್ಕೆ ಸಂಬಂಧಿಸಿದ ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ತನಿಖೆಯ ವೇಳೆ, ನಕಲಿ ಔಷಧ ಜಾಲದ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಆರು ರಾಜ್ಯಗಳ 10 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಒಂದೊಂದು ಸ್ಥಳದಿಂದ ಒಂದೊಂದು ರೀತಿಯ ಔಷಧಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಲ್ಲದೆ, ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನ ಔಷಧಗಳ ಸ್ಟಾಕ್ ಸಂಗ್ರಹಿಸಿಡಲಾಗುತ್ತಿತ್ತು ಎಂದು ತನಿಖಾಧಿಕಾರಿಗಳಿಗೆ ಮಾಹಿತಿ ಲಭಿಸಿದೆ.
ನಕಲಿ ಔಷಧ, ನಕಲಿ ಬಾಟಲ್ಗಳು ಹಾಗೂ ನಕಲಿ ಲೇಬಲ್ಗಳನ್ನು ಬಳಸಿ ಔಷಧಗಳನ್ನು ಸರಬರಾಜು ಮಾಡುತ್ತಿದ್ದ ಜಾಲದ ಕುರಿತು ಎಸ್ಐಟಿ ತನಿಖೆ ಮುಂದುವರಿಸಿದೆ. ಕಿಂಗ್ಪಿನ್ ಎಂದು ಶಂಕಿಸಲಾಗಿರುವ ಪ್ರಶಾಂತ್ ಸೇರಿದಂತೆ ಇತರ ಡೀಲರ್ಗಳ ಮೂಲಕ ಔಷಧಗಳ ಪೂರೈಕೆ ನಡೆಯುತ್ತಿತ್ತು.
ವೀರೇಶ್ ಎಂಬಾತ 2021ರಲ್ಲಿ ಕೃಪಾ ಹೆಲ್ತ್ಕೇರ್ ಕಂಪನಿಯನ್ನು ನೋಂದಣಿ ಮಾಡಿಸಿದ್ದ. ಬಳಿಕ ಪ್ರಶಾಂತ್ ಸೇರಿದಂತೆ ಇತರ ಡೀಲರ್ಗಳಿಂದ ಔಷಧಗಳನ್ನು ತರಿಸಿಕೊಂಡು, ಅವುಗಳನ್ನು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಪೂರೈಸಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಮುಂಬೈ, ಗುಜರಾತ್ ಸೇರಿದಂತೆ ಇತರ ರಾಜ್ಯಗಳಿಗೂ ಔಷಧಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ. ಆಸ್ಪತ್ರೆಗಳಿಗೆ ಔಷಧ ಪೂರೈಕೆ ಮಾಡುವಂತೆ ಮೆಡಿಕಲ್ ರೆಪ್ರೆಸೆಂಟೇಟಿವ್ಗಳಿಗೆ ಹೆಚ್ಚಿನ ಕಮಿಷನ್ನ ಆಮಿಷವೊಡ್ಡಲಾಗುತ್ತಿತ್ತು ಎಂಬ ಆರೋಪವೂ ಇದೆ. ಈ ಜಾಲದಲ್ಲಿ 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್ಗಳು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮಿನರ್ವಾ ಸರ್ಕಲ್ ಬಳಿಯ ಗೋಡೌನ್ನಿಂದ ಔಷಧಗಳನ್ನು ವಿವಿಧೆಡೆಗೆ ಪೂರೈಕೆ ಮಾಡಲಾಗುತ್ತಿತ್ತು ಎಂದು ತನಿಖಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.
ನಕಲಿ ಔಷಧ ಜಾಲದ ಮೂಲಕ ಪ್ರಮುಖವಾಗಿ ಕ್ಯಾನ್ಸರ್ ಔಷಧಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಇದರ ಜೊತೆಗೆ ಥೈರಾಯ್ಡ್ ಔಷಧಗಳು, ವಿಟಮಿನ್ ಮಾತ್ರೆಗಳು ಹಾಗೂ ವಿವಿಧ ಇಂಜೆಕ್ಷನ್ಗಳು ಸೇರಿದಂತೆ ಹಲವು ರೀತಿಯ ಔಷಧಗಳನ್ನು ಪೂರೈಸಲಾಗುತ್ತಿತ್ತು ಎಂದು ಎಸ್ ಐಟಿ ತನಿಖೆಯಿಂದ ತಿಳಿದುಬಂದಿದೆ.

