HomeLatest Newsಲಿಮಾ ನಗರ ಹಾಗೂ ಬೆಂಗಳೂರು ನಗರದ ನಡುವೆ ಐತಿಹಾಸಿಕ 'ಸಿಸ್ಟರ್-ಸಿಟಿ' ಒಪ್ಪಂದ: 10 ಬಿಲಿಯನ್ ಡಾಲರ್...

ಲಿಮಾ ನಗರ ಹಾಗೂ ಬೆಂಗಳೂರು ನಗರದ ನಡುವೆ ಐತಿಹಾಸಿಕ ‘ಸಿಸ್ಟರ್-ಸಿಟಿ’ ಒಪ್ಪಂದ: 10 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಮುನ್ನುಡಿ: ಡಿಸಿಎಂ ಡಾ.ಪರಮೇಶ್ವರ್

ಬೆಂಗಳೂರು: ಪೆರು ಗಣರಾಜ್ಯದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಪೆರು ದೇಶದ ರಾಜಧಾನಿ ಲಿಮಾ ನಂತಹ ಪ್ರಮುಖ ನಗರ ಹಾಗೂ ಬೆಂಗಳೂರು ನಗರದ ನಡುವೆ ಐತಿಹಾಸಿಕ ‘ಸಿಸ್ಟರ್-ಸಿಟಿ’ (Sister-City) ಒಪ್ಪಂದ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಅತ್ಯಂತ ಉತ್ಸುಕವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.

ಭಾರತ ಮತ್ತು ಪೆರು ನಡುವಿನ 63 ವರ್ಷಗಳ ನಿರಂತರ ರಾಜತಾಂತ್ರಿಕ ಬಾಂಧವ್ಯ ಹಾಗೂ ಪೆರು ಗಣರಾಜ್ಯದ 205ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಉನ್ನತ ಮಟ್ಟದ ರಾಜತಾಂತ್ರಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್, ಪೆರುವಿನ ಲ್ಯಾಟಿನ್ ಅಮೆರಿಕನ್ ವಿಮೋಚನಾ ಚಳುವಳಿಗಳು ಮತ್ತು ಮಹಾತ್ಮ ಗಾಂಧಿಯವರ ನೇತೃತ್ವದ ಭಾರತದ ಸ್ವಾತಂತ್ರ್ಯ ಹೋರಾಟದ ನಡುವಿನ ಆಳವಾದ ಸಾಮ್ಯತೆಗಳನ್ನು ಸ್ಮರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಐಟಿ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ (BT) ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ಶೇ. 40 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದುವ ಮೂಲಕ ಪ್ರಥಮ ಸ್ಥಾನದಲ್ಲಿದ್ದು, ಈ ಕ್ಷೇತ್ರದಲ್ಲಿ ಇಡೀ ದೇಶವನ್ನೇ ಮುನ್ನಡೆಸುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಅಭೂತಪೂರ್ವ ಯಶಸ್ಸು ಮತ್ತು ಅಲ್ಲಿ ಹರಿದುಬಂದ ಬೃಹತ್ ಹೂಡಿಕೆಗಳು ರಾಜ್ಯದ ಪ್ರಗತಿಯನ್ನು ಮತ್ತಷ್ಟು ಸಾಬೀತುಪಡಿಸಿವೆ ಎಂದು ಅವರು ತಿಳಿಸಿದರು.

ಬೆಂಗಳೂರು ಮತ್ತು ಪೆರು ದೇಶದ ಪ್ರಮುಖ ನಗರದ ನಡುವೆ ವ್ಯಾಪಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನೇರ ಸಾಂಸ್ಥಿಕ ಸಹಯೋಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಸಿಸ್ಟರ್‌-ಸಿಟಿ ಒಪ್ಪಂದವು ಅತ್ಯಂತ ಮಹತ್ವದ್ದಾಗಿದೆ. ಇದು ಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ 10 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ದೊಡ್ಡ ಮುನ್ನುಡಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದಲ್ಲಿನ ಪೆರು ರಾಯಭಾರಿ ಜೇವಿಯರ್ ಮ್ಯಾನುಯೆಲ್ ಪೌಲಿನಿಚ್ ವೆಲಾರ್ಡ್, ಬೆಂಗಳೂರು ನಗರವು ವಿಶ್ವದ ನಾವೀನ್ಯತೆಯ ಪ್ರಮುಖ ಜಾಗತಿಕ ಕೇಂದ್ರವಾಗಿದೆ. ಇಲ್ಲಿನ ಹೂಡಿಕೆದಾರರು ಹಾಗೂ ಉದ್ಯಮಿಗಳು ತಮ್ಮ ಸಾಂಪ್ರದಾಯಿಕ ವ್ಯಾಪಾರದ ಜೊತೆಗೆ ಪೆರು ದೇಶದಲ್ಲಿ ವ್ಯವಹಾರ ವಿಸ್ತರಣೆಗೆ ಮುಂದಾಗಬೇಕು ಹಾಗೂ ಹೂಡಿಕೆ ಮಾಡಬೇಕು ಎಂದು ಮುಕ್ತ ಆಹ್ವಾನ ನೀಡಿದರು.

ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ರೂಪಾಂತರ, ಫಿನ್‌ಟೆಕ್ (FinTech), ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಭಾರತೀಯ ಟೆಕ್ ಕಂಪನಿಗಳೊಂದಿಗೆ ಸಹಯೋಗ ಸಾಧಿಸಲು ಪೆರು ದೇಶವು ಎದುರು ನೋಡುತ್ತಿದೆ ಎಂದು ಅವರು ಪ್ರಸ್ತಾಪಿಸಿದರು.

ಬೆಂಗಳೂರಿನಲ್ಲಿರುವ ಪೆರುವಿನ ಗೌರವ ಕಾನ್ಸುಲ್ ವಿಕ್ರಮ್ ವಿಶ್ವನಾಥ್ ಅವರ ಆತಿಥ್ಯದಲ್ಲಿ ನಡೆದ ಈ ಪ್ರತಿಷ್ಠಿತ ಸಮಾರಂಭದಲ್ಲಿ ಉನ್ನತ ಸರ್ಕಾರಿ ಅಧಿಕಾರಿಗಳು, ವಿವಿಧ ದೇಶಗಳ ರಾಜತಾಂತ್ರಿಕರು ಮತ್ತು ಬೆಂಗಳೂರಿನ ಪ್ರಮುಖ ವಾಣಿಜ್ಯೋದ್ಯಮಿಗಳು ಭಾಗವಹಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular