HomeBusinessಉದ್ಯೋಗಿ ಮೃತಪಟ್ಟರೆ ನಾಮಿನಿಗೆ ಎಷ್ಟು ಲಕ್ಷ ಸಿಗುತ್ತೆ? ಪ್ರತಿಯೊಬ್ಬ ಪಿಎಫ್ ಸದಸ್ಯರೂ ತಿಳಿಯಬೇಕಾದ ರೂಲ್ಸ್

ಉದ್ಯೋಗಿ ಮೃತಪಟ್ಟರೆ ನಾಮಿನಿಗೆ ಎಷ್ಟು ಲಕ್ಷ ಸಿಗುತ್ತೆ? ಪ್ರತಿಯೊಬ್ಬ ಪಿಎಫ್ ಸದಸ್ಯರೂ ತಿಳಿಯಬೇಕಾದ ರೂಲ್ಸ್

ಬೆಂಗಳೂರು: ದೇಶದ ಪ್ರತಿಯೊಬ್ಬ ಸಂಬಳದ ಉದ್ಯೋಗಿಗೂ ಇಪಿಎಫ್ (EPF – ಉದ್ಯೋಗಿ ಭವಿಷ್ಯ ನಿಧಿ) ಅತ್ಯಂತ ಪ್ರಮುಖವಾದ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಯ ಮೂಲ ವೇತನದ ಒಂದು ಭಾಗ ಹಾಗೂ ಉದ್ಯೋಗದಾತರ (ಕಂಪನಿ) ಇನ್ನೊಂದು ಭಾಗ ಈ ಖಾತೆಗೆ ಪ್ರತಿ ತಿಂಗಳು ಜಮೆಯಾಗುತ್ತದೆ. ನಿವೃತ್ತಿಯ ನಂತರ ಈ ಇಡೀ ಮೊತ್ತ ಬಡ್ಡಿ ಸಮೇತ ಕೈಸೇರುತ್ತದೆ. ಉದ್ಯೋಗಿಯ ವೇತನ ₹6,500 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಈ ಖಾತೆ ತೆರೆಯುವುದು ಕಡ್ಡಾಯ.

ಆದರೆ, ಒಂದು ವೇಳೆ ಉದ್ಯೋಗಿಯು ಸೇವೆಯಲ್ಲಿದ್ದಾಗಲೇ ಅಕಸ್ಮಾತ್ ಮರಣ ಹೊಂದಿದರೆ, ಈ ಇಪಿಎಫ್ ಹಣ ಯಾರಿಗೆ ಸಿಗುತ್ತದೆ? ಹಣ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇದರೊಂದಿಗೆ ಸಿಗುವ ₹7 ಲಕ್ಷದ ಉಚಿತ ವಿಮೆ ಸೌಲಭ್ಯವೇನು? ಇಲ್ಲಿದೆ ಸಂಪೂರ್ಣ ವಿವರ:

ಉದ್ಯೋಗಿ ನಿಧನರಾದರೆ ಪಿಎಫ್ ಹಣ ಯಾರಿಗೆ ಸಿಗುತ್ತದೆ?

ನೌಕರನು ಕೆಲಸದಲ್ಲಿರುವಾಗಲೇ ಮರಣ ಹೊಂದಿದರೆ, ಇಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಉದ್ಯೋಗಿ ನೇಮಿಸಿರುವ ನಾಮಿನಿ (Nominee) ಪಡೆಯುತ್ತಾರೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಮಿನಿ ಇಲ್ಲದಿದ್ದರೆ?: ಒಂದು ವೇಳೆ ಖಾತೆಗೆ ನಾಮಿನಿ ಹೆಸರು ಸೇರಿಸದಿದ್ದರೆ, ಪಿಎಫ್ ಹಣವನ್ನು ಆತನ ಹತ್ತಿರದ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ.

ಕಾನೂನು ಉತ್ತರಾಧಿಕಾರಿ: ಕುಟುಂಬದ ಸದಸ್ಯರು ಅಥವಾ ನಾಮಿನಿ ಇಬ್ಬರೂ ಇಲ್ಲದ ಪಕ್ಷದಲ್ಲಿ, ಕಾನೂನುಬದ್ಧ ಉತ್ತರಾಧಿಕಾರಿ (Legal Heir) ಈ ಹಣವನ್ನು ಕ್ಲೈಮ್ ಮಾಡಬಹುದು.

ಸಂಸ್ಥೆ ಮುಚ್ಚಿದ್ದರೆ: ಒಂದು ವೇಳೆ ಕಂಪನಿಯು ಮುಚ್ಚಿಹೋಗಿದ್ದರೆ, ಇಪಿಎಫ್ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಮ್ಯಾನೇಜರ್ ಮೂಲಕ ಕ್ಲೈಮ್ ಫಾರ್ಮ್‌ಗೆ ಸಹಿ ಮಾಡಿಸಿ ಹಣ ಪಡೆಯಬಹುದು.

ಉದ್ಯೋಗಿಗಳಿಗೆ EPFO ನೀಡುವ ₹7 ಲಕ್ಷದ ಉಚಿತ ವಿಮೆ (EDLI)

ಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಗೂ ಇಪಿಎಫ್‌ಒ ಇಡಿಎಲ್‌ಐ (EDLI – Employees’ Deposit Linked Insurance Scheme) ಎಂಬ ಭರ್ಜರಿ ಉಚಿತ ವಿಮಾ ಸೌಲಭ್ಯ ನೀಡಿದೆ.

ಉದ್ಯೋಗಿಗೆ ಉಚಿತ: ಈ ಇನ್ಶೂರೆನ್ಸ್‌ಗಾಗಿ ಉದ್ಯೋಗಿ ಯಾವುದೇ ಹಣ ಪಾವತಿಸಬೇಕಾಗಿಲ್ಲ. ಕಂಪನಿಯ ಮಾಲೀಕರು ಮಾತ್ರ ಉದ್ಯೋಗಿಯ ಬೇಸಿಕ್ ಸಂಬಳದ ಶೇ. 0.5 ರಷ್ಟು (ಗರಿಷ್ಠ ತಿಂಗಳಿಗೆ ₹75) ಹಣವನ್ನು ಜಮಾ ಮಾಡುತ್ತಾರೆ.

₹7 ಲಕ್ಷದವರೆಗೆ ನೆರವು: ಉದ್ಯೋಗದಲ್ಲಿರುವಾಗ ನೌಕರ ಮರಣ ಹೊಂದಿದರೆ ಆತನ ಕುಟುಂಬಕ್ಕೆ ಗರಿಷ್ಠ ₹7 ಲಕ್ಷದವರೆಗೆ ವಿಮಾ ಮೊತ್ತ ಸಿಗುತ್ತದೆ.

ಲೆಕ್ಕಾಚಾರ ಹೇಗೆ?: ಉದ್ಯೋಗಿಯ ಕೊನೆಯ 12 ತಿಂಗಳ ಸರಾಸರಿ ಸಂಬಳದ ಆಧಾರದ ಮೇಲೆ ₹4,50,000 ವರೆಗೆ ಸಿಗುತ್ತದೆ. ಇದರ ಜೊತೆಗೆ, ಉದ್ಯೋಗಿ ಸತತ 12 ತಿಂಗಳು ಒಂದೇ ಕಡೆ ಕೆಲಸ ಮಾಡಿದ್ದರೆ ಹೆಚ್ಚುವರಿಯಾಗಿ ₹2,50,000 ಬೋನಸ್ ಸೇರಿ ಒಟ್ಟು ₹7 ಲಕ್ಷದವರೆಗೂ ಹಣ ಸಿಗುತ್ತದೆ.

ಕಂಪ್ಲೀಟ್ ಟ್ಯಾಕ್ಸ್ ಫ್ರೀ: ಮಾಲೀಕರು ಪಾವತಿಸುವ ಈ ಕಾಂಟ್ರಿಬ್ಯೂಷನ್‌ಗೆ ತೆರಿಗೆ ವಿನಾಯಿತಿ ಇದೆ. ಅಷ್ಟೇ ಅಲ್ಲ, ಮರಣದ ನಂತರ ಕುಟುಂಬಕ್ಕೆ ಸಿಗುವ ಈ ₹7 ಲಕ್ಷದ ಇನ್ಶೂರೆನ್ಸ್ ಹಣಕ್ಕೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ.

ವಿಮೆ ಹಣ ಪಡೆಯಲು ಯಾರು ಅರ್ಹರು? ಇ-ನಾಮಿನೇಷನ್ ಏಕೆ ಮುಖ್ಯ?

ಈ ಯೋಜನೆಯ ವ್ಯಾಪ್ತಿಗೆ ಉದ್ಯೋಗಿಯ ಪತಿ/ಪತ್ನಿ, ಅವಿವಾಹಿತ ಹೆಣ್ಣುಮಕ್ಕಳು ಹಾಗೂ 25 ವರ್ಷದೊಳಗಿನ ಗಂಡುಮಕ್ಕಳು ಬರುತ್ತಾರೆ. ಉದ್ಯೋಗಿ ಮರಣ ಹೊಂದಿದ ತಕ್ಷಣ ಈ ಹಣ ನೇರವಾಗಿ ನಾಮಿನಿಯ ಬ್ಯಾಂಕ್ ಖಾತೆಗೆ ಹೋಗುವುದರಿಂದ, ಮದುವೆಯಾದಾಗ ಅಥವಾ ಮಕ್ಕಳಾದಾಗ ಪಿಎಫ್ ಖಾತೆಯ ಇ-ನಾಮಿನೇಷನ್ (e-Nomination) ಅನ್ನು ತಕ್ಷಣ ಅಪ್‌ಡೇಟ್ ಮಾಡುವುದು ತುಂಬಾ ಮುಖ್ಯ.

ಕ್ಲೈಮ್ ಮಾಡುವುದು ಹೇಗೆ? ಯಾವ ಫಾರ್ಮ್‌ಗಳು ಬೇಕು?

ವಿಮೆ ಹಣವನ್ನು ಕ್ಲೈಮ್ ಮಾಡಲು ಉದ್ಯೋಗಿಯ ಕುಟುಂಬದವರು ಫಾರಂ 5 ಐಎಫ್ (Form 5 IF) ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದಕ್ಕೆ ಕಂಪನಿಯ ಮಾಲೀಕರ ಸಹಿ ಮತ್ತು ವೆರಿಫಿಕೇಶನ್ ಅಗತ್ಯ. ಉದ್ಯೋಗಿ ಕೆಲಸ ಬದಲಾಯಿಸಿದರೂ ಈ ಇಡಿಎಲ್‌ಐ ಕವರೇಜ್ ತಾನಾಗಿಯೇ ಮುಂದುವರಿಯುತ್ತದೆ.

ಒಂದು ವೇಳೆ ಕಂಪನಿಯ ಮಾಲೀಕರು ಸಹಿ ಮಾಡದಿದ್ದರೆ ಅಥವಾ ಸಿಗದಿದ್ದರೆ?:

ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಇಪಿಎಫ್‌ಒ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದೆ. ನಿಮ್ಮ ಹತ್ತಿರದ ಬ್ಯಾಂಕ್ ಮ್ಯಾನೇಜರ್, ಸ್ಥಳೀಯ ಎಂಪಿ (MP) ಅಥವಾ ಎಂಎಲ್‌ಎ (MLA), ಗೆಜೆಟೆಡ್ ಅಧಿಕಾರಿ, ಮ್ಯಾಜಿಸ್ಟ್ರೇಟ್, ಪೋಸ್ಟ್‌ಮಾಸ್ಟರ್ ಅಥವಾ ಸಿಬಿಟಿ ಸದಸ್ಯರ ಬಳಿ ಅಟೆಸ್ಟೇಷನ್ (ಸಹಿ) ಮಾಡಿಸಿ ದಾಖಲೆಗಳನ್ನು ರೀಜನಲ್ ಇಪಿಎಫ್ ಕಮಿಷನರ್ ಕಚೇರಿಗೆ ಸಲ್ಲಿಸಬಹುದು.

ಜಂಟಿ ಲಾಭ: ಇಡಿಎಲ್‌ಐ ವಿಮೆ ಹಣದ ಜೊತೆಗೆ ಪಿಎಫ್ ಹಣ ಹಿಂಪಡೆಯಲು ಫಾರಂ 20 ಮತ್ತು ಪೆನ್ಷನ್ ಸೌಲಭ್ಯಕ್ಕಾಗಿ ಫಾರಂ 10ಸಿ ಅಥವಾ 10ಡಿ ಅನ್ನು ಒಟ್ಟಿಗೇ ಸಲ್ಲಿಸಬಹುದು. ಅಂದರೆ ಇಪಿಎಫ್, ಇಪಿಎಸ್ ಮತ್ತು ಇಡಿಎಲ್‌ಐ ಮೂರೂ ಯೋಜನೆಗಳ ಲಾಭ ಜಂಟಿಯಾಗಿ ಸಿಗುತ್ತದೆ.

30 ದಿನಗಳಲ್ಲಿ ಹಣ ಸಿಗದಿದ್ದರೆ ಶೇ. 12 ರಷ್ಟು ಬಡ್ಡಿ

ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿದ ನಂತರ ಇಪಿಎಫ್‌ಒ ಕಚೇರಿಯು ಕೇವಲ 30 ದಿನಗಳ ಒಳಗಾಗಿ ಈ ಇನ್ಶೂರೆನ್ಸ್ ಕ್ಲೈಮ್ ಅನ್ನು ಇತ್ಯರ್ಥ ಪಡಿಸಬೇಕು ಎಂಬ ಕಠಿಣ ನಿಯಮವಿದೆ. ಒಂದು ವೇಳೆ ಅಧಿಕಾರಿಗಳು ನಿಗದಿತ 30 ದಿನಗಳಿಗಿಂತ ತಡ ಮಾಡಿದರೆ, ವಿಳಂಬವಾದ ದಿನಗಳಿಗೆ ವಾರ್ಷಿಕ ಶೇಕಡಾ 12 ರಷ್ಟು ಬಡ್ಡಿಯ ಸಮೇತ ಕುಟುಂಬಕ್ಕೆ ಹಣ ಪಾವತಿಸಬೇಕಾಗುತ್ತದೆ. ಇದು ಕಷ್ಟದ ಸಮಯದಲ್ಲಿ ಕುಟುಂಬಕ್ಕೆ ದೊಡ್ಡ ಆರ್ಥಿಕ ರಕ್ಷಣೆಯಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular