ಕರ್ನಾಟಕ ಸರ್ಕಾರ ರಾಜ್ಯದ ಪೊಲೀಸರಿಗೆ ಶೀಘ್ರವೇ ಗುಡ್‌ನ್ಯೂಸ್ ನೀಡಲಿದೆ. ವರ್ಷದಲ್ಲಿ 12ರ ಬದಲು 13 ತಿಂಗಳ ವೇತನವನ್ನು ಅವರು ಪಡೆಯಲಿದ್ದಾರೆ. ವಾರ್ಷಿಕ 30 ದಿನಗಳ ಹೆಚ್ಚುವರಿ ವೇತನವನ್ನು ಪೊಲೀಸರಿಗೆ ನೀಡುವ ಕುರಿತು ಶೀಘ್ರ ಆದೇಶ ಪ್ರಕಟವಾಗಲಿದೆ. ಇದಕ್ಕಾಗಿ ಅನುದಾನ ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಶಾಂತಿ, ಸುವ್ಯವಸ್ಥೆ ಕಾಪಾಡಲು ಸರ್ಕಾರಿ ರಜೆ, ಹಬ್ಬದ ದಿನಗಳಲ್ಲೂ ಕೆಲಸ ಮಾಡುವ ಪೊಲೀಸರಿಗೆ ‘ಪತ್ರಾಂಕಿತ ರಜೆ’ ನೀಡಲಾಗುತ್ತದೆ. ಈ ರಜೆಯನ್ನು 30 ದಿನಗಳಿಗೆ ವಿಸ್ತರಣೆ ಮಾಡಬೇಕು ಮತ್ತು ಅದಕ್ಕೆ ಹೆಚ್ಚುವರಿ 30 ದಿನಗಳ ವೇತನ ನೀಡಬೇಕು ಎಂಬುದು ಪ್ರಸ್ತಾವನೆಯ ಅಂಶ
ಪ್ರಸ್ತುತ ಕಾನ್ಸ್‌ಸ್ಟೇಬಲ್ ಹಾಗೂ ಹೆಡ್ ಕಾನ್ಸ್‌ಸ್ಟೇಬಲ್‌ಗಳಿಗೆ 30 ದಿನದ ರಜೆ ಸಿಗುತ್ತಿದೆ. ಎಎಸ್ಐ, ಎಆರ್‌ಎಸ್‌ಐ, ಎಸ್ಐ, ಆರ್‌ಎಸ್‌ಐಗಳಿಗೆ 15 ದಿನದ ರಜೆಯನ್ನು ನೀಡಲಾಗುತ್ತಿದೆ. ರಜೆಯನ್ನು 30 ದಿನಕ್ಕೆ ವಿಸ್ತರಣೆ ಮಾಡಿ, ಹೆಚ್ಚುವರಿ ವೇತನ ನೀಡಲು ವಾರ್ಷಿಕ 89.31 ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಎನ್. ಸತೀಶ್ ಕುಮಾರ್ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ ಇವರಿಗೆ ಪತ್ರವನ್ನು ಬರೆದಿದ್ದಾರೆ. ವಾರ್ಷಿಕ ಆಗುವ ಖರ್ಚಿನ ಮಾಹಿತಿಯನ್ನು ನೀಡಿದ್ದು, ವೇತನ ನೀಡಲು ಅನುಮೋದನೆ ಕೊಡುವಂತೆ ಮನವಿ ಸಲ್ಲಿಸಿದ್ದಾರೆ.
ಪತ್ರದ ವಿವರಗಳು: ಈ ಪತ್ರ ಪತ್ರಾಂಕಿತ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಎ.ಎಸ್.ಐ/ಎ.ಆರ್.ಎಸ್.ಐ, ಪಿ.ಎಸ್.ಐ/ ಆರ್.ಎಸ್.ಐ, ಪಿ.ಐ/ ಆರ್.ಪಿ.ಐ, ಡಿವೈ.ಎಸ್.ಪಿ (ಸಿವಿಲ್)/ ಡಿವೈ.ಎಸ್.ಪಿ (ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳಿಗೆ 30 ದಿನಗಳ ವೇತನವನ್ನು ಮಂಜೂರು ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಎ.ಎಸ್.ಐ/ಎ.ಆರ್.ಎಸ್.ಐ, ಪಿಐ/ಆರ್.ಎಸ್.ಐ, ಡಿವೈ.ಎಸ್.ಪಿ (ಸಿವಿಲ್)/ ಡಿವೈ.ಎಸ್.ಪಿ (ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳಿಗೆ 15 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಪತ್ರಾಂಕಿತ ರಜಾ ಸೌಲಭ್ಯವನ್ನು ಮಂಜೂರು ಮಾಡಲು ಪತ್ರಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಸ್ತುತ ಸರ್ಕಾರಿ ಆದೇಶದಲ್ಲಿ ಪಿ.ಸಿ. ಮತ್ತು ಹೆಚ್.ಸಿ. ರವರುಗಳಿಗೆ ಸರ್ಕಾರಿ ದಿನಗಳಂದು ಕರ್ತವ್ಯ ನಿರ್ವಹಿಸುವ ಸಂಬಂಧ 30 ದಿನಗಳ ಪತ್ರಾಂಕಿತ ರಜಾ ವೇತನವನ್ನು ಮಂಜೂರಿಸಲಾಗುತ್ತಿದೆ. ಸರ್ಕಾರಿ ಆದೇಶದಲ್ಲಿ ಪಿ.ಎಸ್.ಐ. ಮತ್ತು ಎ.ಎಸ್.ಐ. ರವರುಗಳಿಗೆ 15 ದಿನಗಳ ಪತ್ರಾಂಕಿತ ರಜಾ ವೇತನ ಸೌಲಭ್ಯವನ್ನು ಮಂಜೂರಿಸಲಾಗಿರುತ್ತದೆ.
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗಳು ಅನೇಕ ಸಂದರ್ಭಗಳಲ್ಲಿ ದಿನದಲ್ಲಿ 12-13 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಿರುತ್ತದೆ ಹಾಗೂ ತಿಂಗಳಿಗೆ ಕನಿಷ್ಠ 2 ದಿನಗಳ ರಜೆ ಪಡೆಯುವುದು ಕೂಡ ಕಷ್ಟಸಾಧ್ಯವಾಗಿರುತ್ತದೆ. ಸರ್ಕಾರಿ ಘೋಷಿತ ರಜಾ ದಿನಗಳು ಎರಡನೇ ಶನಿವಾರ, ಭಾನುವಾರ ಸೇರಿದಂತೆ ವಾರ್ಷಿಕ ಅಂದಾಜು 75 ದಿನಗಳ ರಜೆಗಳು ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರಿಗೆ ಲಭ್ಯವಾದರೂ, ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳು ಸರ್ಕಾರದ ಕರ್ತವ್ಯದ ಮೇಲೆ ಹಾಜರಾಗಬೇಕಿರುತ್ತದೆ.
ಅನಿಯಮಿತ ಕೆಲಸದ ಅವಧಿ, ಕೆಲಸ ನಿರ್ವಹಣೆಯಲ್ಲಿ ಅನುಭವಿಸುವ ಒತ್ತಡ, ದಿನಕಳೆದಂತೆ ಜ್ಞಾನವನ್ನು ಪರಿಷ್ಕರಿಸಿಕೊಳ್ಳಬೇಕಾದ ಒತ್ತಡ ಇತ್ಯಾದಿ ಕಾರಣಗಳಿಂದಾಗಿ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ವೈಯಕ್ತಿಕ ಜೀವನವೇ ಇಲ್ಲವಾಗುತ್ತದೆ. ದೀರ್ಘಕಾಲ ಮನೆಯಿಂದ ಹೊರಗುಳಿಯುವ ಕಾರಣ ಉತ್ತಮ ಆಹಾರವಿಲ್ಲದೆ, ಸಮಯಾಭಾವದಿಂದ ದೈಹಿಕ ವ್ಯಾಯಾಮಗಳಿಲ್ಲದೆ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳು ಅತಿ ಹೆಚ್ಚು ದೀರ್ಘಕಾಲೀನ ಒತ್ತಡ ಸಂಬಂಧಿ ಮಾನಸಿಕ ಹಾಗೂ ದೈಹಿಕ ಖಾಯಿಲೆಗಳಿಂದ ಬಳಲುತ್ತಾರೆ.
ಪಿ.ಸಿ.ರವರುಗಳು ಮತ್ತು ಹೆಚ್.ಸಿ. ಪತ್ರಾಂಕಿತ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಂತೆಯೇ ಎ.ಎಸ್.ಐ/ ಎ.ಆರ್.ಎಸ್.ಐ, ಪಿ.ಎಸ್.ಐ/ ಆರ್.ಎಸ್.ಐ. ಪಿ.ಐ/ ಆರ್.ಪಿ.ಐ, ಡಿವೈ.ಎಸ್.ಪಿ.(ಸಿವಿಲ್)/ ಡಿವೈ.ಎಸ್.ಪಿ.(ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳು ಸಹ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಆದುದರಿಂದ, ಎ.ಎಸ್.ಐ ವೃಂದದಿಂದ ಎಸ್.ಪಿ (ನಾನ್ ಐಪಿಎಸ್) ವೃಂದದವರೆಗೆ ಈ ಸೌಲಭ್ಯವನ್ನು ವಿಸ್ತರಿಸಲು ಕೋರಲಾಗುತ್ತಿದೆ.
* ಪ್ರಸ್ತುತ ಎ.ಎಸ್.ಐ. ಮತ್ತು ಪಿ.ಎಸ್.ಐ. ರವರುಗಳಿಗೆ ನೀಡಲಾಗುತ್ತಿರುವ 15 ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಹಾಗೂ ಸದರಿ ಪ್ರಸ್ತಾವನೆಗೆ ಆವರ್ತಕ ವೆಚ್ಚ ರೂ. 60,76,93,505-00. ತಗುಲಲಿದೆ.
*ಪಿ.ಐ. ಹುದ್ದೆಯಿಂದ ಎಸ್.ಪಿ. (ನಾನ್ ಐಪಿಎಸ್) ಹುದ್ದೆಯವರೆಗೆ 30 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು ನೀಡಲು ಪ್ರಸ್ತಾಪಿಲಾಗಿರುತ್ತದೆ ಹಾಗೂ ಸದರಿ ಪ್ರಸ್ತಾವನೆಗೆ ಆವರ್ತಕ ವೆಚ್ಚ ರೂ. 28,55,00,827-00 ತಗುಲಲಿದೆ.
ಮೇಲೆ ವಿವರಿಸಲಾದ ಅಂಶಗಳನ್ನು ಪರಿಗಣಿಸಿ, ಎ.ಎಸ್.ಐ. ಮತ್ತು ಪಿ.ಎಸ್.ಐ. ರವರುಗಳಿಗೆ ನೀಡಲಾಗುತ್ತಿರುವ 15 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಹೆಚ್ಚಿಸಲು ಹಾಗೂ ಪಿ.ಐ. ಹುದ್ದೆಯಿಂದ ಎಸ್.ಪಿ. (ನಾನ್ ಐಪಿಎಸ್) ಹುದ್ದೆಯವರೆಗೆ 30 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು ನೀಡಲು ಸರ್ಕಾರದ ಮಂಜೂರಾತಿ ನೀಡಲು ಮತ್ತೊಮ್ಮೆ ಕೋರಿದೆ. ಪ್ರಸ್ತಾವನೆಗೆ ಒಟ್ಟಾರೆ ರೂ. 89,31,94,332-00 ಆವರ್ತಕ ವೆಚ್ಚವಾಗಲಿದ್ದು, ಪ್ರಸ್ತಾವನೆಗೆ ಸಂಬಂಧಿಸಿದಂತೆ, ವೆಚ್ಚಪಟ್ಟಿ, ಪ್ರಸಕ್ತ ಸಾಲಿನ ತಪಾಸಣಾ ಪಟ್ಟಿಯನ್ನು ಲಗತ್ತಿಸಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

