HomeTourismಕರ್ನಾಟಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ: ಶನಿವಾರ ಡಿಕೆಶಿ ಮಹತ್ವದ ಸಭೆ

ಕರ್ನಾಟಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ: ಶನಿವಾರ ಡಿಕೆಶಿ ಮಹತ್ವದ ಸಭೆ

ಕರ್ನಾಟಕದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಶನಿವಾರ ಮಹತ್ವದ ಸಭೆ ನಡೆಯಲಿದೆ. 3 ಜಿಲ್ಲೆಗಳ ಎಲ್ಲಾ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು, ಉದ್ದಿಮೆದಾರರು ಭಾಗವಹಿಸಲಿದ್ದಾರೆ.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯದ ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜನವರಿ 10ರಂದು ಮಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ 3 ಜಿಲ್ಲೆಗಳು ಎಲ್ಲಾ ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಉದ್ದಿಮೆದಾರರು ಭಾಗವಹಿಸಿ, ಪಕ್ಷಾತೀತವಾಗಿ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ರಾಜ್ಯದಲ್ಲಿ ಗೋವಾದ ಗಡಿಯಿಂದ ಮಂಗಳೂರಿನ ಗಡಿಯವರೆಗೆ 344 ಕಿ.ಮೀ. ಕಡಲತೀರವಿದ್ದು, ಇಲ್ಲಿನ ಜನತೆ ಉದ್ಯೋಗ ಅರಸಿ, ಇತರೆ ಜಿಲ್ಲೆ, ರಾಜ್ಯಗಳಿಗೆ ತೆರಳದೇ ಅವರಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ಮೂಲಕ ಇಲ್ಲಿಯೇ ಉದ್ಯೋಗ ಸೃಷ್ಠಿಸಿ, ಆದಾಯದ ಮೂಲಗಳನ್ನು ಸೃಷ್ಠಿಸುವ ಮೂಲಕ ಜಿಲ್ಲೆಗಳನ್ನು ಸಮಗ್ರವಾಗಿ ಅಭಿವೃದ್ಧ್ದಿಪಡಿಸುವ ಉದ್ದೇಶದಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನೀತಿಯನ್ನು ರಚಿಸಲಾಗುತ್ತಿದೆ” ಎಂದರು.

“ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇರಳ ಮತ್ತು ಗೋವಾ ಮಾದರಿಯಲ್ಲಿ ಸಿ.ಆರ್.ಝಡ್ ನಿಯಮಗಳಲ್ಲಿ ರಿಯಾಯತಿ ನೀಡುವ ಕುರಿತಂತೆ ಈ ಸಭೆಯಲ್ಲಿ ಚರ್ಚಿಸಿ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ರಿಯಾಯತಿ ಕೋರಿ ಪತ್ರ ಬರೆಯಲಾಗುವುದು. ಈ ಸಭೆಗೆ ಗೋವಾ ಪ್ರವಾಸೋದ್ಯಮ ಸಚಿವರನ್ನೂ ಕೂಡಾ ಆಹ್ವಾನಿಸಲಾಗಿದೆ” ಎಂದು ಸಚಿವರು ಹೇಳಿದರು.

“ಕರಾವಳಿ ಪ್ರದೇಶದಲ್ಲಿನ ಪರಿಸರ, ಮೀನುಗಾರಿಕೆ, ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಕುರಿತಂತೆ ಬಂಡವಾಳ ಹೂಡಿಕೆದಾರರನ್ನು ಸಭೆಗೆ ಆಹ್ವಾನಿಸಲಾಗಿದೆ” ಎಂದು ತಿಳಿಸಿದರು.

“ಇಲ್ಲಿ ಬಂಡವಾಳ ಹೂಡುವವರಿಗೆ ರಿಯಾಯತಿ ದರದಲ್ಲಿ ಭೂಮಿ, ವಿದ್ಯುತ್, ನೀರು ಸೇರಿದಂತೆ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು” ಎಂದು ಸಚಿವರು ಭರವಸೆ ನೀಡಿದರು.

“ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಪ್ರವಾಸಿ ಕ್ಷೇತ್ರದ ಪರಿಣಿತರು, ಸಾರ್ವಜನಿಕರು ತಮ್ಮ ಸಲಹೆ, ಯೋಜನೆಗಳು ಮತ್ತು ಸೂಚನೆಗಳನ್ನು ನೀಡುವಂತೆ” ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಮಾತನಾಡಿ, “ಕರಾವಳಿ ಭಾಗದಲ್ಲಿ ಸಿ.ಆರ್.ಝಡ್ ನಿಯಮಗಳಲ್ಲಿ ಸಡಿಲಿಕೆ, ಬಂಡವಾಳ ಹೂಡಿಕೆದಾರರಿಗೆ ತೆರಿಗೆ ಮತ್ತು ವಿದ್ಯುತ್ ರಿಯಾಯತಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದಲ್ಲಿ ಹೆಚ್ಚಿನ ಹೂಡಿಕೆದಾರರು ಆಗಮಿಸಲಿದ್ದಾರೆ ಹಾಗೂ ಸಿಂಗಲ್ ವಿಂಡೋ ಸಿಸ್ಟಂ ಮೂಲಕ ಅವರಿಗೆ ಅಗತ್ಯ ಅನುಮತಿಗಳನ್ನು ಶೀಘ್ರದಲ್ಲಿ ನೀಡುವಂತಾಗಬೇಕು” ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, “ಮಲೆನಾಡು ಭಾಗದಲ್ಲಿನ ಜಲಪಾತಗಳ ವೀಕ್ಷಣೆಗೆ ಮುಕ್ತ ಅವಕಾಶ, ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಪ್ರವಾಸಿ ಸ್ಥಳಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಹೋಟೆಲ್ ಗಳು, ಮುಖ್ಯ ಸ್ಥಳಗಳಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ ವ್ಯವಸ್ಥೆ, ಕುಟುಂಬ ಸಮೇತ ಪ್ರವಾಸಕ್ಕೆ ಬಂದು ಆನಂದಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು, ಹೋಂ ಸ್ಟೇ ಗಳಿಗೆ ಅಗತ್ಯ ಅನುಮತಿಯನ್ನು ನೀಡಬೇಕು” ಎಂದು ಒತ್ತಾಯಿಸಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular