ಇಂದು ( ಫೆಬ್ರವರಿ 1 ) ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026 ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ 6 ವಿಕೆಟ್‌ಗಳ ಗೆಲುವನ್ನು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕರ್ನಾಟಕ ಬುಲ್ಡೋಜರ್ಸ್ ಮೂರನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುತ್ತಿದ್ದು, 12 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ 20 ಓವರ್‌ಗಳಲ್ಲಿ 129 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 130 ರನ್‌ಗಳ ಸಾಧಾರಣ ಗುರಿ ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ 16.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 130 ರನ್ ಬಾರಿಸಿತು.
ಬೆಂಗಾಲ್ ಟೈಗರ್ಸ್ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ ಕರ್ನಾಟಕ ಬುಲ್ಡೋಜರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಆಟಗಾರ ಜಾಯ್ ಹೊರತುಪಡಿಸಿ ಉಳಿದ ಯಾವೊಬ್ಬ ಆಟಗಾರನೂ ಸಹ ಬುಲ್ಡೋಜರ್ಸ್ ಬೌಲಿಂಗ್ ಅಬ್ಬರದ ಎದುರು ಸಮರ್ಥರಾಗಿ ನಿಲ್ಲಲಿಲ್ಲ. ಜಾಯ್ 54 ರನ್ ಗಳಿಸಿದರೆ, ಉದಯ್ 5, ಜ್ಯಾಮಿ 4, ಜಿಶು 17, ರಾಹುಲ್ 10, ಯೂಸುಫ್ 1, ರತ್ನದೀಪ್ ಡಕ್‌ಔಟ್, ಆದಿತ್ಯ ಡಕ್‌ಔಟ್, ಇಂದ್ರಶಿಶ್ 17 ಹಾಗೂ ಆನಂದ ಅಜೇಯ 12 ರನ್ ಕಲೆಹಾಕಿದರು.
ಕರ್ನಾಟಕ ಬುಲ್ಡೋಜರ್ಸ್ ಪರ ಪ್ರತಾಪ್ ನಾರಾಯಣ್ ಮೂರು ವಿಕೆಟ್, ಸುನಿಲ್ ರಾವ್ ಎರಡು ವಿಕೆಟ್, ಕರಣ್ ಆರ್ಯನ್ ಹಾಗೂ ಕಾರ್ತಿಕ್ ಜಯರಾಮ್ ತಲಾ ಒಂದೊಂದು ವಿಕೆಟ್ ಪಡೆದರು.
ಕರ್ನಾಟಕ ಬುಲ್ಡೋಜರ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಿರುಪ್ ಭಂಡಾರಿ 2 ರನ್ ಗಳಿಸಿದರೆ, ಡಾರ್ಲಿಂಗ್ ಕೃಷ್ಣ 7 ರನ್ ಕಲೆಹಾಕಿದರು. ನಿರುಪ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಮತ್ತೋರ್ವ ಆಟಗಾರ ರಾಜೀವ್ ಹನು 37 ಎಸೆತಗಳಲ್ಲಿ 69 ರನ್ ಚಚ್ಚಿ ಗೆಲುವಿನ ಬುನಾದಿ ಹಾಕಿದರು. ಇನ್ನುಳಿದಂತೆ ಕರಣ್ ಆರ್ಯನ್ 3 ರನ್ ಗಳಿಸಿದರೆ, ಜಯರಾಮ್ ಕಾರ್ತಿಕ್ ಅಜೇಯ 15 ರನ್ ಹಾಗೂ ಮಂಜುನಾಥ್ ಅಜೇಯ 20 ರನ್ ಗಳಿಸಿದರು.
ಬೆಂಗಾಲ್ ಟೈಗರ್ಸ್ ಪರ ರತ್ನದೀಪ್ ಮೂರು ವಿಕೆಟ್ ಹಾಗೂ ರಾಹುಲ್ ಒಂದು ವಿಕೆಟ್ ಪಡೆದರು.

