ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕರ್ನಾಟಕ ಬಜೆಟ್-2026 ಮಂಡಿಸಿದರು. ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಕರ್ನಾಟಕದ ಸರ್ಕಾರಿ ನೌಕರರ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ಬಜೆಟ್ ಭಾಷಣದ ಬಳಿಕ ಸರ್ಕಾರಿ ನೌಕರರು ನಿರಾಶರಾಗಿದ್ದಾರೆ.
ಸಿದ್ದರಾಮಯ್ಯ ಈ ಬಾರಿ 4.49 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು. ಸರ್ಕಾರಿ ನೌಕರರು ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಸಲ್ಲಿಕೆ ಮಾಡಿದ್ದರು. ಅದರಲ್ಲೂ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿ ಕುರಿತು ಅಪಾರ ನಿರೀಕ್ಷೆ ಇತ್ತು.
ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ, “ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಸೃಷ್ಟಿಗೆ ನಾವು ಆದ್ಯತೆ ನೀಡಿದ್ದೇವೆ” ಎಂದರು.
“ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಉದ್ಯೋಗ ನೇಮಕಾತಿಗಳಲ್ಲಿ ನ್ಯಾಯಾಲಯದ ಪ್ರಕರಣಗಳಿಂದ ಉಂಟಾಗಿದ್ದ ವಿಳಂಬವನ್ನು ಪರಿಗಣಿಸಿ ವಯೋಮಿತಿಯಲ್ಲಿ ಒಂದು ಬಾರಿಗೆ ಐದು ವರ್ಷಗಳ ಸಡಿಲಿಕೆ ನೀಡಿದ್ದೇವೆ” ಎಂದು ಹೇಳಿದರು.
“ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಯಲ್ಲಿ ರಾಜ್ಯದ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ” ಎಂದರು. ಆದರೆ ಎನ್‌ಪಿಎಸ್ ರದ್ದುಗೊಳಿಸುವುದು, ಹಳೆ ಪಿಂಚಣಿ ಯೋಜನೆ ಮರು ಜಾರಿ, ಸರ್ಕಾರಿ ನೌಕರರ ಕ್ಯಾಂಟೀನ್ ಸೇರಿದಂತೆ ಯಾವುದೇ ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡಲಿಲ್ಲ.
ಬಜೆಟ್‌ನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಘೋಷಣೆಗಳು
- ಶ್ರೀ ಆರ್.ವಿ. ದೇಶಪಾಂಡೆರವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಸಲ್ಲಿಸಿರುವ 10 ವರದಿಗಳಲ್ಲಿನ 6,031 ಶಿಫಾರಸ್ಸುಗಳ ಪೈಕಿ 2,014 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
- ರಾಜ್ಯದ ಎಲ್ಲಾ ಅಂಗನವಾಡಿಗಳು, ಶಾಲೆಗಳು, ಕಾಲೇಜುಗಳು ಹಾಗೂ ವಸತಿನಿಲಯಗಳಲ್ಲಿ AI ಆಧಾರಿತ Facial Recognition ಸಾಫ್ಟ್‌ವೇರ್ ಮುಖಾಂತರ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಹಾಗೂ ಪ್ರತಿದಿನದ ಫಲಾನುಭವಿಗಳ ಹಾಜರಾತಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು.
ಸರ್ಕಾರಿ ನೌಕರರ ಬೇಡಿಕೆಗಳು: ಈ ಬಾರಿಯ ಬಜೆಟ್‌ನಲ್ಲಿ 3 ಪ್ರಮುಖ ಬೇಡಿಕೆಗಳನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರದ ಮುಂದಿಟ್ಟಿತ್ತು.
- NPS ರದ್ದುಗೊಳಿಸಿ OPS ಜಾರಿಗೊಳಿಸುವುದು
- ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರು/ ನಿವೃತ್ತ ನೌಕರರು ಹಾಗೂ ಇತರೆ ಸಂಸ್ಥೆಗಳ ನೌಕರರು ಹಾಗೂ ಕುಟುಂಬದವರಿಗೆ MSIL ಸಂಸ್ಥೆಯ ಮೂಲಕ ಪ್ರತಿ ಜಿಲ್ಲೆಗಳಲ್ಲಿ ನೌಕರರ ಕ್ಯಾಂಟೀನ್ ಪ್ರಾರಂಭಿಸುವುದು
- ಸರ್ಕಾರಿ ನೌಕರರ ಕರ್ತವ್ಯದ ವೇಳೆಯಲ್ಲಿ ಸಾರ್ವಜನಿಕರಿಂದ ನಡೆಯುವ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು

