ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕರ್ನಾಟಕ ಬಜೆಟ್-2026 ಮಂಡಿಸಿದರು. ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸಿದ್ದಾರೆ.
ಕರ್ನಾಟಕದ ಕರಾವಳಿಯಿಂದ ಹಿಡಿದು ಅಂಜನಾದ್ರಿ ಬೆಟ್ಟದ ತನಕ ವಿವಿಧ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಬಜೆಟ್ ಭಾಷಣದಲ್ಲಿ ಅವರು ಕರಾವಳಿ ಜಿಲ್ಲೆಗಳ ವಿಶೇಷ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ʻಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆʼಯನ್ನು ರೂಪಿಸಲಾಗುವುದು ಎಂದರು.
ಈ ತಾಣಗಳಲ್ಲಿ ವಾಯುಯಾನ ಹಾಗೂ ಜಲಸಾಹಸ ಪ್ರವಾಸೋದ್ಯಮ ಭಾಗೀದಾರರ ಸಹಯೋಗದೊಂದಿಗೆ Sea Plane ಹಾಗೂ Heli Taxi ಗಳ ಮುಖಾಂತರ ಸಂಪರ್ಕ ಕಲ್ಪಿಸಲಾಗುವುದು. ಜೊತೆಗೆ Joy Ride ಹಾಗೂ River Cruise ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಪ್ರಮುಖ ಘೋಷಣೆಗಳು
- ನಮ್ಮ ರಾಜ್ಯಕ್ಕೆ ಆಗಮಿಸುವ ಎಲ್ಲಾ ಪ್ರವಾಸಿಗಳಿಗೆ ಸುಮಧುರ, ಸಕಾರಾತ್ಮಕ ಅನುಭವವನ್ನು ನೀಡುವ ಸಲುವಾಗಿ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು ಹಾಗೂ ಭದ್ರತಾ ಪೊಲೀಸ್ ಸಿಬ್ಬಂದಿಗಳಿಗೆ ಮೃದು ಕೌಶಲ್ಯ ತರಬೇತಿ ನೀಡುವುದರ ಮೂಲಕ ವೃತ್ತಿಪರತೆಯನ್ನು ವೃದ್ಧಿಗೊಳಿಸಲು ಒಂದು ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಪ್ರವಾಸ ಮಾರ್ಗದರ್ಶಕರಿಗೆ ಆಯ್ದ ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ತರಬೇತಿ ನೀಡಲು ಡಿಪ್ಲೋಮಾ ಕೋರ್ಸ್ ಪ್ರಾರಂಭಿಸಲಾಗುವುದು.
- ಪ್ರಮುಖ ಪ್ರವಾಸಿ ತಾಣವಾದ ಗದಗ-ಕಪ್ಪತಗುಡ್ಡ-ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಅಭಿವೃದ್ಧಿಪಡಿಸಲಾಗುವುದು.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿಯಿಂದ ಕೈಮರದವರೆಗೆ PPP ಮಾದರಿಯಲ್ಲಿ ರೋಪ್-ವೇ ನಿರ್ಮಿಸಲಾಗುವುದು.
- ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಮಗ್ರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ರಾಜ್ಯದ ಸಂರಕ್ಷಿತ 844 ಸ್ಮಾರಕಗಳ ಹಾಗೂ 1,000 ಅಸುರಕ್ಷಿತ ಸ್ಮಾರಕಗಳ ರಕ್ಷಣೆ ಮಾಡುವ ಹಿತದೃಷ್ಟಿಯಿಂದ 1,000 ಸ್ಮಾರಕ ಮಿತ್ರರನ್ನು ಗುರುತಿಸಿ ತರಬೇತಿ ನೀಡಲಾಗುವುದು. ಇವರುಗಳನ್ನು ಇಲಾಖೆಯ ಮಾನ್ಯತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕ್ರಮವಹಿಸಲಾಗುವುದು.
- ಅಂಜನಾದ್ರಿ ಬೆಟ್ಟವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರವು ಸಮಗ್ರವಾದ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ರೂಪಿಸಿದೆ. ಭಾರತ ಸರ್ಕಾರದಿಂದ ಅರಣ್ಯ ಮತ್ತು ಪರಿಸರ ತೀರುವಳಿ ಹಾಗೂ UNESCO ಸಹಮತಿ ಪಡೆದು ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು.

