ಕಾರವಾರ: ಚಲಿಸುತ್ತಿದ್ದ ಕಾರಿನ ಮೇಲೆ ಕಂಟೇನರ್ ಪಲ್ಟಿಯಾಗಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಐದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ವೈದ್ಯ ದಂಪತಿ ಹಾಗೂ ಮತ್ತೋರ್ವ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರ ಮೂಲದ ವೈದ್ಯ ದಂಪತಿ ಮಕ್ಕಳೊಂದಿಗೆ ಪ್ರವಾಸಕ್ಕಾಗಿ ಬಂದಿದ್ದರು. ಅಂಕೋಲಾದಿಂದ ಕಾರವಾರದತ್ತ ತೆರಳುತ್ತಿದ್ದಾಗ ಕಾರಿನ ಮೇಲೆ ಕಂಟೇನರ್ ವಾಹನ ಪಲ್ಟಿಯಾಗಿ ಬಿದ್ದಿದ್ದು, ಸ್ಥಳದಲ್ಲೇ ಮಗು ಸಾವನ್ನಪ್ಪಿದೆ.

