ಬೆಂಗಳೂರು- ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ, ಕನ್ನಡದಲ್ಲಿ ಮಾತನಾಡುವವರನ್ನು ಕಡೆಗಣಿಸುವ ಘಟನೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಕನ್ನಡ ಮಾತೃಭಾಷೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡ ಕೇವಲ ಮಾತನಾಡುವ ಭಾಷೆಯಾಗಬಾರದು, ಅದು ಅನ್ನದ ಭಾಷೆಯೂ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಮಹಿಳೆಯೊಬ್ಬರು ಕನ್ನಡ ಭಾಷೆಯಲ್ಲಿ ತಮ್ಮ ಪರಿಚಯ ಮಾಡಿಕೊಂಡ ಕಾರಣಕ್ಕೆ ಉದ್ಯೋಗ ನೀಡಲು ನಿರಾಕರಿಸಲಾಗಿದೆ ಎಂಬ ಘಟನೆ ಬೆಳಕಿಗೆ ಬಂದಿತ್ತು. ಇಂತಹ ಘಟನೆಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಕನ್ನಡ ಭಾಷೆಯನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಸರ್ಕಾರದ ಬದ್ಧತೆಯಾಗಿದೆ. ನಾಡಿನ ಮೂಲೆಮೂಲೆಗಳಲ್ಲಿರುವ ಕಲಾವಿದರು, ಸಾಹಿತಿಗಳು ಹಾಗೂ ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯೋತ್ಸವದ ದಿನ ಕನ್ನಡದ ಬಾವುಟ ಹಾರಿಸಿ, ಕನ್ನಡದ ಘೋಷಣೆಗಳನ್ನು ಕೂಗುವುದಷ್ಟೇ ಕನ್ನಡಾಭಿಮಾನಕ್ಕೆ ಸೀಮಿತವಾಗಬಾರದು. ವರ್ಷದ 365 ದಿನಗಳೂ ಕನ್ನಡವನ್ನು ಪ್ರೀತಿಸಬೇಕು, ಬಳಸಬೇಕು ಮತ್ತು ಬೆಳೆಸಬೇಕು. ಕನ್ನಡದ ಬಳಕೆ ಕೇವಲ ಭಾಷಣ ಹಾಗೂ ಸಂಭ್ರಮಕ್ಕೆ ಸೀಮಿತವಾಗದೆ, ದೈನಂದಿನ ಬದುಕು ಮತ್ತು ಉದ್ಯೋಗ ಕ್ಷೇತ್ರಗಳಲ್ಲಿಯೂ ವ್ಯಾಪಕವಾಗಬೇಕು ಎಂಬ ಸಂದೇಶವನ್ನು ಸಚಿವರು ನೀಡಿದ್ದಾರೆ.
ಜಾತಿ, ಧರ್ಮ ಹಾಗೂ ಪ್ರದೇಶದ ಭೇದಗಳನ್ನು ಮರೆತು ಕನ್ನಡದ ಬಂಧದಲ್ಲಿ ಎಲ್ಲರೂ ಒಂದಾಗಬೇಕು. ಕನ್ನಡ ಭಾಷೆಯ ಗೌರವ, ಅಸ್ತಿತ್ವ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಿವರಾಜ್ ತಂಗಡಗಿ ತಮ್ಮ ಪೋಸ್ಟ್ನಲ್ಲಿ ಕರೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಭಾಷೆಯ ಕಾರಣಕ್ಕೆ ತಾರತಮ್ಯವಾಗಬಾರದು ಎಂಬ ಸ್ಪಷ್ಟ ಸಂದೇಶವನ್ನು ಸಚಿವರು ನೀಡಿದ್ದಾರೆ.

