ಮೈಸೂರು: ಬಜೆಟ್ನಲ್ಲಿ ಕನ್ನಡ ಶಾಲೆಗಳ ಕಡೆಗಣನೆ ಖಂಡಿಸಿ ಮಾ.12 ರಂದು ಕನ್ನಡ ಶಾಲೆಗಳ ಬಂದ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯಾದ್ಯಂತ ಇರುವ ಕನ್ನಡ ಶಾಲೆಗಳನ್ನು ಬಂದ್ ಮಾಡುತ್ತೇವೆ. ಮೈಸೂರಿನ ಜಯ ಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತೇವೆ. ಬಜೆಟ್ ನಲ್ಲಿ ಇಂಗ್ಲಿಷ್ ಶಾಲೆಗಳಿಗೆ 3900 ಕೋಟಿ ರೂ ಕೊಟ್ಟಿದ್ದೀರಿ. ಕನ್ನಡ ಶಾಲೆಗಳ ಅಭಿವೃದ್ಧಿಗೆ ನಯಾ ಪೈಸೆ ಘೋಷಣೆ ಮಾಡಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇಲ್ಲ. ಕನ್ನಡ ಮಾಧ್ಯಮ ಇರುವುದು ಸರ್ಕಾರಿ ಶಾಲೆಗಳಲ್ಲಿ. ಸರ್ಕಾರಿ ಶಾಲೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಕೊಡಬೇಕಿತ್ತು. ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿಫ಼್ದರು.
ಈ ವಿಚಾರವನ್ನು ಮುಂದಿಟ್ಟುಕೊಂಡು ಮಾ.12 ರಂದು ಎಲ್ಲಾ ಕನ್ನಡ ಶಾಲೆಗಳ ಬಂದ್ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ. ಸರ್ಕಾರದ ನಡೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಮನೆಯಲ್ಲಿ ಮಕ್ಕಳು ಅವರ ಅಪ್ಪ, ಅಮ್ಮನ ಮೊಬೈಲ್ ಎತ್ತಿಕೊಂಡು ನೋಡುತ್ತಾರೆ. ಅವರನ್ನು ಏನು ಮಾಡಲು ಆಗುತ್ತೆ, ಜೈಲಿಗೆ ಹಾಕುವುದಕ್ಕೆ ಆಗುತ್ತಾ? ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಏಕೆ ಮಾಡುತ್ತಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ.
ಮೊಬೈಲ್ ಜಗತ್ತಿನ ಮಾಹಿತಿ ತಿಳಿಯಲು ವಿದ್ಯಾರ್ಥಿಗಳಿಗೆ ಅನುಕೂಲ. ಮೊಬೈಲ್ ಬ್ಯಾನ್ ಅಥವಾ ಸಾಮಾಜಿಕ ಜಾಲತಾಣ ನಿಷೇಧ ಸರಿಯಲ್ಲ. ಸರ್ಕಾರದ ಈ ಆದೇಶ ಹಿಂಪಡೆಯಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

