ಕಾರವಾರ: ವಸಂತ್ ನಾಯ್ಕ್ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಜ್ಯೋತಿಷಿ ಕಮಲಾಕರ್ ಭಟ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಮಲಾಕರ್ ಭಟ್ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದೆ.
ಜಾಮೀನು ಪಡೆದು ಜೈಲಿನಿಂದ ಹೊರ ಬರಬೇಕೆಂಬ ಯತ್ನದಲ್ಲಿದ್ದ ಕಮಲಾಕರ್ ಭಟ್ ಗೆ ಬಿಗ್ ಶಾಕ್ ಎದುರಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಕಮಲಾಕರ್ ಭಟ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ತುಂಗಾನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ಕಳೆದ ಕೆಲ ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಕಮಲಾಕರ ಭಟ್, ಕೊಲೆಯ ವಿಚಾರವಾಗಿ ಪೊಲೀಸ್ ವಿಚಾರಣೆ ವೇಳೆ ಕೊಲೆಯಾದ ಸ್ಥಳದಲ್ಲಿ ತಾನು ಇರಲಿಲ್ಲ, ಕೊಲೆ ಆದ ಸಂದರ್ಭದಲ್ಲಿ ನಾನು ಬೇರೆ ಕಡೆ ಇದ್ದೆ. ಬೇಕಾದರೆ ನನ್ನ ಮೊಬೈಲ್ ಲೊಕೇಶನ್ ಚೆಕ್ ಮಾಡಿ ಎಂದಿದ್ದರಂತೆ. ಲೊಕೇಶನ್ ಚೆಕ್ ಮಾಡಿದಾಗ ಕೊಲೆಯಾದ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ. ಸಿದ್ದಾಪುರದಲ್ಲಿ ಇದ್ದರು, ಆದರೆ ಅವರಗುಪ್ಪಗೆ ಹೊಗಿರಲಿಲ್ಲ. ಪೊಲೀಸ್ ತನಿಖೆ ವೇಳೆ ಅವರಗುಪ್ಪಗೆ ಹೋಗದೆ ಇರುವುದು ಕಂಡುಬಂದಿತ್ತು.
ಹಾಗಾಗಿ ತಾನು ಜೈಲಿನಿಂದ ಹೊರ ಬರಬಹುದು ಎಂಬ ಆಶಯದಲ್ಲಿದ್ದ ಕಮಲಾಕರ ಭಟ್ಗೆ ಇದೀಗ ಪೋಕ್ಸೋ ಕೇಸ್ ದಾಖಲಾಗಿರುವುದು ಇನ್ನಷ್ಟು ಸಂಕಷ್ಟ ತಂದಿದೆ.
ವಿವಾಹಿತ ಮಹಿಳೆ ಸುಚಿತ್ರಾ ನಾಯ್ಕ್ ಜೊತೆ ಅಕ್ರಮ ಸಂಬಂಧಹೊಂದಿದ್ದ ಪ್ರಕರಣದಲ್ಲಿ ಸಿಲುಕಿದ್ದ ಕಮಲಾಕರ್ ಭಟ್ ವಿರುದ್ಧ ವಸಂತ್ ನಾಯ್ಕ್ ಎಂಬಾತನನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿತ್ತು. ಇದೀಗ ಕಮಲಾಕರ್ ಭಟ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

