ಪಶ್ಚಿಮ ಬಂಗಾಳದ ಪುರಾತನ ಕಾಳೀಘಾಟ್ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸಾಂಪ್ರದಾಯಿಕ ಮೀನಿನ ಪ್ರಸಾದವನ್ನು ನೆಲದ ಮೇಲೆ ಕುಳಿತು ಸ್ವೀಕರಿಸುವ ಮೂಲಕ ಇತ್ತೀಚೆಗೆ ಭುಗಿಲೆದ್ದಿದ್ದ ಆಹಾರ ಪದ್ಧತಿ ವಿವಾದಕ್ಕೆ ಮಹತ್ವದ ತಿರುವು ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬಂಗಾಳಿ ಹಿಂದೂಗಳ ಆಹಾರ ಸಂಪ್ರದಾಯದ ಬಗ್ಗೆ ಧಾರ್ಮಿಕ ಮುಖಂಡ ಬಾಗೇಶ್ವರ ಬಾಬಾ ನೀಡಿದ್ದ ವಿವಾದಾತ್ಮಕ ಹೇಳಿಕೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಕೌಶಿಕಿ ಅಮಾವಾಸ್ಯೆಯ ಪವಿತ್ರ ಸಂದರ್ಭದಲ್ಲಿ ಕಾಳೀಘಾಟ್‌ಗೆ ಭೇಟಿ ನೀಡಿದ ಮುಖ್ಯಮಂತ್ರಿ, ಹುರಿದ ಮೀನು, ಮೀನಿನ ತಲೆ ಹಾಗೂ ಬಾಸಂತಿ ಪುಲಾವ್ ಒಳಗೊಂಡ ಮತ್ಸ್ಯ ಭೋಗ್ ಸೇವಿಸಿದ್ದು ಎಲ್ಲರ ಗಮನ ಸೆಳೆದಿದೆ.
ಶತಮಾನಗಳ ಇತಿಹಾಸವಿರುವ ಕಾಳೀಘಾಟ್ ದೇವಸ್ಥಾನದಲ್ಲಿ ಆರಾಧ್ಯ ದೇವತೆಯಾದ ಕಾಳಿ ಮಾತೆಗೆ ಮೀನು ಹಾಗೂ ಬಲಿ ನೀಡಿದ ಮೇಕೆ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸುವ ಅನಾದಿ ಕಾಲದ ಸಂಪ್ರದಾಯವಿದೆ. ಆದರೆ, ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಅವರು ದುರ್ಗಾಪೂಜೆಯ ಸಮಯದಲ್ಲಿ ಮಾಂಸಾಹಾರ ತ್ಯಜಿಸುವಂತೆ ಬಂಗಾಳದ ಹಿಂದೂಗಳಿಗೆ ಕರೆ ನೀಡಿದ್ದರು.
ಅಷ್ಟೇ ಅಲ್ಲದೆ, ದುರ್ಗಾಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸುವ ಬಂಗಾಳಿ ಹಿಂದೂಗಳನ್ನು ಪಾಷಂಡಿಗಳು ಹಾಗೂ ಕಪಟಿಗಳು ಎಂದು ಕರೆದಿದ್ದರು. ಹಬ್ಬದ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಬೇಕು ಎಂದು ಸಾರ್ವಜನಿಕ ಸಭೆಯಲ್ಲಿ ಮೊಬೈಲ್ ಬೆಳಕು ಬೆಳಗಿಸುವ ಮೂಲಕ ಜನರಿಂದ ಬೆಂಬಲ ಕೋರಿದ್ದರು. ಈ ಹೇಳಿಕೆಯು ಬಂಗಾಳದ ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ದೇವಾಲಯದಲ್ಲಿ ಸಾಂಪ್ರದಾಯಿಕ ಮತ್ಸ್ಯ ನೈವೇದ್ಯವನ್ನು ಸ್ವೀಕರಿಸಿರುವ ವಿಡಿಯೋ ಬಹಿರಂಗಗೊಂಡಿದ್ದು, ಸಸ್ಯಹಾರಿ ಮತ್ತು ಮಾಂಸಾಹಾರಿ ನಡುವಿನ ಈ ಅನಗತ್ಯ ವಿವಾದಕ್ಕೆ ತೆರೆ ಎಳೆಯಲು ಆಡಳಿತ ಪಕ್ಷ ಮುಂದಾಗಿದೆ.
ಬಂಗಾಳದ ನಂಬಿಕೆ, ಸಂಪ್ರದಾಯ ಮತ್ತು ಜೀವನ ಶೈಲಿಯನ್ನು ಗೌರವಿಸಿ ಮುಖ್ಯಮಂತ್ರಿಗಳು ಕಾಳಿ ಮಾತೆಯ ಪಾರಂಪರಿಕ ಮೀನಿನ ಪ್ರಸಾದ ಸ್ವೀಕರಿಸಿದ್ದಾರೆ. ರಾಜ್ಯದ ಸಂಸ್ಕೃತಿ, ಆಚಾರ-ವಿಚಾರಗಳು ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಸದಾ ಬದ್ಧರಾಗಿರುವುದಾಗಿ ಪಕ್ಷದ ವಕ್ತಾರ ಪ್ರದೀಪ್ ಭಂಡಾರಿ ಸ್ಪಷ್ಟಪಡಿಸಿದ್ದಾರೆ. ಬಂಗಾಳದಲ್ಲಿ ಜನರ ಆಹಾರ ಪದ್ಧತಿಯ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂಬ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸುವ ಮೂಲಕ, ಧಾರ್ಮಿಕ ಮುಖಂಡರ ವಿವಾದಾತ್ಮಕ ಹೇಳಿಕೆಗೆ ಸರ್ಕಾರ ಈ ಮೂಲಕ ಪರೋಕ್ಷವಾಗಿ ಉತ್ತರ ನೀಡಿದೆ.

