ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ಮಾಧ್ಯಮ ಸಂಸ್ಥೆಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಿದ್ದುಪಡಿ ಮಾಡಲಾದ ಹೊಸ ಮಾರ್ಗಸೂಚಿಯನ್ವಯ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ “ಪೂರ್ಣಾವಧಿ/ಅರೆಕಾಲಿಕ ವರದಿಗಾರರಾಗಿ ನೇಮಕವಾಗಿದ್ದಲ್ಲಿ ಆಯಾ ಮಾಧ್ಯಮ ಸಂಸ್ಥೆಯ ಸಂಪಾದಕರ / ಸ್ಥಾನಿಕ ಸಂಪಾದಕರ / ಮುಖ್ಯಸ್ಥರ ಶಿಫಾರಸ್ಸು ಪತ್ರ ಮತ್ತು ಸೇವಾ ಪ್ರಮಾಣ ಪತ್ರವನ್ನು ಲಗತ್ತಿಸಿ “ಸೇವಾ ಸಿಂಧು” ಪೋರ್ಟಲ್ https://sevasindhu.karnataka.gov.in ಮೂಲಕ ಸಮೀಪದ ಗ್ರಾಮ-1 ಕೇಂದ್ರದಲ್ಲಿ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಈ ಹಿಂದೆ ಇದ್ದ ಮಾರ್ಗಸೂಚಿಯಲ್ಲಿ 11 ತಿಂಗಳ ವೇತನ ಪತ್ರ ಸಲ್ಲಿಸಬೇಕು ಎಂಬ ಷರತ್ತನ್ನು ಸಡಿಲಿಸಿ. ಆಯಾ ಮಾಧ್ಯಮ ಸಂಸ್ಥೆಯ ಸಂಪಾದಕರ, ಸ್ಥಾನಿಕ ಸಂಪಾದಕರ/ಮುಖ್ಯಸ್ಥರ ಶಿಫಾರಸ್ಸು ಪತ್ರವನ್ನು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ.
ಆನ್ ಲೈನ್ ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ. ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಸುದ್ದಿ ಸಂಗ್ರಹಿಸಲು ಅನುಕೂಲ ಕಲ್ಪಿಸಲು ಸರ್ಕಾರವು ವಾರ್ತಾ ಇಲಾಖೆಯ ಮೂಲಕ ಉಚಿತ ಬಸ್ ಪಾಸ್ ಗಳನ್ನು ನೀಡುತ್ತಿದೆ.
ರಾಜ್ಯದ ಎಲ್ಲಾ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ “ಸೇವಾಸಿಂಧು” ಪೋರ್ಟಲ್ ಮೂಲಕ ಗ್ರಾಮ-1 ಕೇಂದ್ತದ ಮೂಲಕ 2026 ರ ಅಕ್ಟೋಬರ್ 31 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಚಿತ್ರಕೃಪೆ-ಎಐ)
ಸಕ್ರೆಬೈಲು ಆನೆ ಬಿಡಾರಕ್ಕೆ ಪಶುವೈದ್ಯರ ನೇಮಕ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ, ಅ.17ಕ್ಕೆ ನೇರ ಸಂದರ್ಶನ
ಶಿವಮೊಗ್ಗ: ಶಿವಮೊಗ್ಗ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದ ಆನೆಗಳ ಆರೈಕೆ, ಚಿಕಿತ್ಸೆ ಹಾಗೂ ವನ್ಯಜೀವಿ ರಕ್ಷಣಾ ಕಾರ್ಯಗಳಿಗಾಗಿ ಹೊರಗುತ್ತಿಗೆ ಆಧಾರದಲ್ಲಿ ಪಶುವೈದ್ಯರೊಬ್ಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಅಕ್ಟೋಬರ್ 16 ರವರೆಗೆ ವಿಸ್ತರಿಸಲಾಗಿದೆ.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಿಸಿರುವಂತೆ, ಈ ಹುದ್ದೆಯು ತುರ್ತು ಸಂದರ್ಭಗಳಲ್ಲಿ ವನ್ಯಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು, ಮರಣೋತ್ತರ ಪರೀಕ್ಷೆ ನಡೆಸುವುದು ಹಾಗೂ ಮಾನವ-ವನ್ಯಪ್ರಾಣಿ ಸಂಘರ್ಷದ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಅರ್ಜಿದಾರರು ಬ್ಯಾಚಲರ್ ಆಫ್ ವೆಟರ್ನರಿ ಸೈನ್ಸ್ & ಅನಿಮಲ್ ಹಸ್ಬ್ಯಂಡರಿ (B.V.Sc & A.H) ಪದವಿ ಪಡೆದಿರಬೇಕು. ವನ್ಯಜೀವಿ ವಿಷಯದಲ್ಲಿ ಸ್ನಾತಕೋತ್ತರ ಪಶುವೈದ್ಯಕೀಯ ಪದವಿ (ಪೋಸ್ಟ್ ಗ್ರಾಜ್ಯುಯೇಷನ್) ಪಡೆದವರಿಗೆ ಹಾಗೂ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ವನ್ಯಜೀವಿ ಕ್ಷೇತ್ರ ಅಥವಾ ಮೃಗಾಲಯಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಸಕ್ತರು ತಮ್ಮ ಸ್ವಯಂ ವಿವರಗಳ ಜೊತೆಗೆ ಅಗತ್ಯ ದಾಖಲಾತಿಗಳೊಂದಿಗೆ ಅ.17 ರಂದು ಬೆಳಿಗ್ಗೆ 10 ಗಂಟೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ,ವನ್ಯಜೀವಿ ವಿಭಾಗ ಶಿವಮೊಗ್ಗ ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಅರ್ಜಿ ನಮೂನೆಯನ್ನು ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಅಥವಾ https://sakrebailuelephantcamp.org/ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ: 08182-222983, ಸಿ.ಬಿ.ಗುರುರಾಜ್ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 9481461553, ಅಂಥೋಣಿ ರೇಗೊ, ವಲಯ ಅರಣ್ಯಾಧಿಕಾರಿ: 9632848453 ಇವರನ್ನು ಸಂಪರ್ಕಿಸಬಹುದೆಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

