HomeKarnatakaಜೋಗ ಜಲಪಾತ ಇನ್ಮುಂದೆ ಸರ್ವಋತು ಪ್ರವಾಸಿ ತಾಣ: ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸಿ:ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್ ನಿರ್ದೇಶನ

ಜೋಗ ಜಲಪಾತ ಇನ್ಮುಂದೆ ಸರ್ವಋತು ಪ್ರವಾಸಿ ತಾಣ: ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸಿ:ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್ ನಿರ್ದೇಶನ

ಬೆಂಗಳೂರು: ವಿಶ್ವವಿಖ್ಯಾತ ಜೋಗ ಜಲಪಾತವನ್ನು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಸರ್ವಋತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೈಗೊಂಡಿರುವಂತಹ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು .

ಇಂಧನ ಭವನದ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ, ಜೋಗ ಜಲಪಾತ ಪ್ರದೇಶದಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ವರ್ಷವಿಡೀ ನಿಗದಿತ ಅವಧಿಯಲ್ಲಿ ಜಲಪಾತಕ್ಕೆ ನೀರು ಹರಿಸುವ ಉದ್ದೇಶಿತ ಯೋಜನೆಯ ಕುರಿತು ಬುಧವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಪರಿಶೀಲನೆ ಮತ್ತು ವಿವಿಧ ಇಲಾಖೆಗಳ ಅನುಮೋದನೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೋಗ ಜಲಪಾತದ ಮೇಲ್ಭಾಗಕ್ಕೆ ನೀರನ್ನು ಪಂಪ್ ಮಾಡಿ, ವರ್ಷವಿಡೀ ನಿಗದಿತ ಅವಧಿಯಲ್ಲಿ ಜಲಪಾತದ ದೃಶ್ಯ ವೈಭವವನ್ನು ಪ್ರವಾಸಿಗರಿಗೆ ಅನುಭವಿಸುವಂತೆ ಮಾಡುವ ಪ್ರಸ್ತಾವನೆಯ ಕುರಿತು ಚರ್ಚಿಸಿದ ಸಚಿವರು, ಇದಕ್ಕೆ ಅಗತ್ಯವಿರುವ ನೀರಿನ ಪ್ರಮಾಣ, ಪಂಪಿಂಗ್ ಸಾಮರ್ಥ್ಯ, ವಿದ್ಯುತ್ ಬಳಕೆ ಹಾಗೂ ನಿರ್ವಹಣಾ ವೆಚ್ಚವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ತಾಂತ್ರಿಕ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಮಟ್ಟದ ಸಂಬಂಧಿತ ಅನುಮೋದನೆಗಳನ್ನು ತ್ವರಿತವಾಗಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ರಾತ್ರಿ ವೇಳೆ ವಿದ್ಯುತ್ ಲಭ್ಯತೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಸೌರಶಕ್ತಿ ಅಥವಾ ಪಂಪ್ಡ್ ಸ್ಟೋರೇಜ್ ಮಾದರಿಯಂತಹ ಪರ್ಯಾಯ ವ್ಯವಸ್ಥೆಗಳ ಕಾರ್ಯಸಾಧ್ಯತೆ ಮತ್ತು ಆರ್ಥಿಕ ಪರಿಣಾಮಗಳನ್ನೂ ಪರಿಶೀಲಿಸುವಂತೆ ಸೂಚಿಸಿದರು.

ಜೋಗ ಜಲಪಾತವು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಅದರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಮಳೆಗಾಲಕ್ಕೆ ಮಾತ್ರ ಸೀಮಿತಗೊಳಿಸದೆ, ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ತಾಣವನ್ನಾಗಿ ರೂಪಿಸುವುದು ನಮ್ಮ ಉದ್ದೇಶ. ನಿಗದಿತ ಅವಧಿಯಲ್ಲಿ ನೀರು ಹರಿಸುವ ಪ್ರಸ್ತಾವನೆಯನ್ನು ತಾಂತ್ರಿಕ ಕಾರ್ಯಸಾಧ್ಯತೆ, ವಿದ್ಯುತ್ ವೆಚ್ಚ ಮತ್ತು ಸುರಕ್ಷತೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಸಬೇಕು. ಅಗತ್ಯ ಅನುಮೋದನೆಗಳನ್ನು ಪಡೆಯುವಲ್ಲಿ ಅನಗತ್ಯ ವಿಳಂಬವಾಗಬಾರದು. ಸದ್ಯದಲ್ಲೇ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಇನ್ನು ಪ್ರವಾಸಿಗರಿಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿಗದಿತ ಅವಧಿಯಲ್ಲಿ ಜಲಪಾತದ ವೀಕ್ಷಣೆಗೆ ಅವಕಾಶ ಕಲ್ಪಿಸುವ ಕುರಿತು ಸೂಕ್ತ ವ್ಯವಸ್ಥೆ ರೂಪಿಸಬೇಕು. ಸಂಜೆ 5 ಅಥವಾ 6 ಗಂಟೆಯ ನಂತರದ ಪ್ರವಾಸಿಗರ ಪ್ರವೇಶ ಮತ್ತು ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಚಿವರು ಸೂಚಿಸಿದರು.

ಅಲ್ಲದೆ, ಪುರಾತತ್ವ ಇಲಾಖೆ ಸೇರಿದಂತೆ ಸಂಬಂಧಿತ ಸಂಸ್ಥೆಗಳಿಂದ ಅಗತ್ಯ ನಿರಾಕ್ಷೇಪಣಾ ಪತ್ರಗಳು ಮತ್ತು ಅನುಮೋದನೆಗಳನ್ನು ಪಡೆದು, ಜೋಗ್ ಮ್ಯಾನೇಜ್‌ಮೆಂಟ್ ಅಥಾರಿಟಿ ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (JLR) ಅಧಿಕಾರಿಗಳ ಸಮನ್ವಯದೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಜೋಗ ಜಲಪಾತವನ್ನು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ತಾಣವನ್ನಾಗಿ ರೂಪಿಸಲು ಅಭಿವೃದ್ಧಿ ಕಾಮಗಾರಿಗಳು, ನೀರು ಹರಿಸುವ ವ್ಯವಸ್ಥೆ ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಸಮಗ್ರವಾಗಿ ಪರಿಗಣಿಸಬೇಕಿದೆ. ಯೋಜನೆಯ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ಆಧರಿಸಿ KPCL, ಜೋಗ್ ಮ್ಯಾನೇಜ್‌ಮೆಂಟ್ ಅಥಾರಿಟಿ, JLR ಹಾಗೂ ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲಾಗುವುದು. ಅಗತ್ಯ ಅನುಮೋದನೆಗಳನ್ನು ಪಡೆದು, ಪ್ರವಾಸಿಗರಿಗೆ ಉತ್ತಮ ಮತ್ತು ಸುರಕ್ಷಿತ ಅನುಭವ ಒದಗಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular