ಬೆಂಗಳೂರು: ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಪಾದಯಾತ್ರೆಗೆ ಬೆಂಗಳೂರು ಪೊಲೀಸರು ತಡೆಯೊಡ್ದಿದ್ದು, ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಣಮಿಣಿಕೆ ಕಾಲೋನಿ ಬಳಿ ಪೊಲೀಸರು ಜೆಡಿಎಸ್ ಹಾಗೂ ರೈತರ ಪಾದಯಾತ್ರೆ ತಡೆದಿದ್ದಾರೆ. ರಸ್ತೆಗೆ ಬ್ಯಾರಿಕೇಡ್ ಗಳನ್ನು ಅಳವಡಿಸಿ ಪಾದಯಾತ್ರೆಗೆ ತಡೆಯೊಡ್ದಲಾಗಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು, ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ ಜೆಡಿಎಸ್ ಕಾರ್ಯಕರ್ಯರು, ರೈತರು ಪೊಲಿಸರನ್ನು ಲೆಕ್ಕಿಸದೇ ಬ್ಯಾರಿಕೇಡ್ ಗಳನ್ನು ತಳ್ಳಿ ಮುನ್ನುಗ್ಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಪಾದಯಾತ್ರೆ ತಡೆಯುತ್ತಿದ್ದಾರೆ. ನಾವು ಶಾಂತಿಯುತವಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ. ಆದಾಗ್ಯೂ ನಮ್ಮ ಪಾದಯಾತ್ರೆಗೆ ಅಡ್ಡಿ ಪಡಿಸುವ ಯತ್ನ ನಡೆದಿದೆ. ಏನೇ ಮಾಡಿದರೂ ಪಾದಯಾತ್ರೆ ನಿಲ್ಲಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡಡಿ ಟೌನ್ ಶಿಪ್ ಗೆ ರೈತರ ವಿರೋಧವಿದೆ, ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾನು ಇಂದು ನೈಸ್ ರಸ್ತೆಯವರೆಗೂ ಪಾದಯಾತ್ರೆ ಮಾಡಲು ನಿರ್ಧರಿಸಿದ್ದು, ನಾಳೆ ಅಲ್ಲಿಂದ ಫ್ರೀಡಂ ಪಾರ್ಕ್ ವರೆಗೂ ಪಾದಯಾತ್ರೆ ಮುಂದುವರೆಯಲಿದೆ. ಎಷ್ಟೇ ತಡೆಯೊಡ್ಡಿದರೂ ಪಾದಯಾತ್ರೆ ಮುಂದುವರೆಯಲಿದೆ ಎಂದಿದ್ದಾರೆ.
ಪೊಲಿಸರು ತಡೆಗೂ ಬಗ್ಗದ ಜೆಡಿಎಸ್ ಕಾರ್ಯಕರ್ತರು, ರೈತಮುಖಂಡರು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರೆಸಿದ್ದು, ಕಣಮಿಣಿಕೆಯಿಂದ ಹೆಜ್ಜಾಲ ಕಡೆಗೆ ಪಾದಯಾತ್ರೆ ಸಾಗಿದೆ.

