HomeKarnatakaಗೂಂಡಾಗಿರಿ ಮಾಡಿದರೆ ಹೆದರುವುದಿಲ್ಲ ಎಂದ ಚಲವಾದಿ ನಾರಾಯಣಸ್ವಾಮಿ

ಗೂಂಡಾಗಿರಿ ಮಾಡಿದರೆ ಹೆದರುವುದಿಲ್ಲ ಎಂದ ಚಲವಾದಿ ನಾರಾಯಣಸ್ವಾಮಿ

ಬೆಂಗಳೂರು- ಕಾಂಗ್ರೆಸ್‌ನ ಕೆಲವರು ಕಳೆದ ಒಂದು ವಾರದಿಂದ ಪದೇಪದೇ ಬಂದು ಗೂಂಡಾಗಿರಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. “ನಾನು 40 ವರ್ಷಗಳಿಂದ ನಿಮ್ಮ ಜೊತೆ ಇದ್ದವನು, ನಿಮ್ಮ ಕ್ಲಾಸ್‌ಮೇಟ್. ನಿಮ್ಮ ರೀತಿಯಲ್ಲಿ ಗೂಂಡಾಗಿರಿ ಮಾಡಿಲ್ಲ. ನಿಮ್ಮ ಗೂಂಡಾಗಿರಿಯನ್ನು ನೋಡಿದ್ದೇನೆ. ನನ್ನನ್ನು ಹೆದರಿಸಲು ನಿಮಗೆ ಆಗುವುದಿಲ್ಲ. ನಾನು ನಿಮ್ಮನ್ನು ಹೆದರಿಸುವುದಿಲ್ಲ. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಶಕ್ತಿ ಮತ್ತು ಯುಕ್ತಿಯಿಂದ ಹೋರಾಟ ಮಾಡುತ್ತೇನೆ” ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಒಂದು ವಾರದಿಂದ ಕಾಂಗ್ರೆಸ್‌ನ ಕೆಲವರು ಪದೇಪದೇ ಬಂದು ಗಲಾಟೆ ಮಾಡುತ್ತಿರುವ ಬಗ್ಗೆ ಪೊಲೀಸ್ ಕಮಿಷನರ್ ಅವರ ಗಮನಕ್ಕೆ ತರಲಾಗಿದೆ. ಅಗತ್ಯ ಬಂದೋಬಸ್ತ್ ಮಾಡಲಾಗುತ್ತಿದೆ. ಇಂದು ಕೂಡ ಹಲವು ಆದೇಶಗಳು ಬಂದಿದ್ದು, ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಗುಂಪುಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡ ಚಲವಾದಿ ನಾರಾಯಣಸ್ವಾಮಿ, “ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ವೈಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಕಾಂಗ್ರೆಸ್‌ನಿಂದಲೇ ಬೇರ್ಪಟ್ಟಿವೆ. ಗುಂಡೂರಾವ್, ಬಂಗಾರಪ್ಪ ಅವರ ಕಾಲದಲ್ಲೂ ಕಾಂಗ್ರೆಸ್‌ನೊಳಗಿನ ಬೆಳವಣಿಗೆಗಳು ನಡೆದಿವೆ” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

“ದಲಿತರನ್ನು ತುಳಿದು ನೀವು ಬೆಳೆದಿದ್ದೀರಿ”

ಪ್ರಿಯಾಂಕ್ ಖರ್ಗೆ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಚಲವಾದಿ ನಾರಾಯಣಸ್ವಾಮಿ, “ದಲಿತರನ್ನು ತುಳಿದು ನೀವು ಬಲಿತರಾಗಿದ್ದೀರಿ. ಯಾವ ದಲಿತರನ್ನು ಬೆಳೆಸಿದ್ದೀರಿ ಎಂಬುದನ್ನು ಹೇಳಿ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಪ್ರಿಯಾಂಕ್ ಖರ್ಗೆ ಅವರ ಕಾಲದಲ್ಲಿ ದಲಿತರು ಸರ್ವನಾಶವಾಗುತ್ತಿದ್ದಾರೆ” ಎಂದು ಆರೋಪಿಸಿದರು.

“ನೀವು ಬೆಳೆಯಲು ದಲಿತರನ್ನು ತುಳಿದಿದ್ದೀರಿ. ಸದಾಶಿವನಗರದಲ್ಲಿ ಎಷ್ಟು ದಲಿತರ ಮನೆಗಳಿವೆ ಎಂದು ಹೇಳಿ. ಅಂಬೇಡ್ಕರ್ ಅವರ ಹೆಸರನ್ನು ಹೇಳಲು ನಿಮಗೆ ಯೋಗ್ಯತೆ ಇದೆಯೇ?” ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಸೋಲಿಗೂ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದು ಆರೋಪಿಸಿದ ಅವರು, “ನಿಮ್ಮ ದುರಹಂಕಾರದಿಂದ ಖರ್ಗೆ ಅವರು ಕಲಬುರಗಿಯಲ್ಲಿ ಸೋತರು. ಅವರ ಸೋಲಿಗೆ ನೀವೇ ಕಾರಣ” ಎಂದರು.

“ನೀವೊಬ್ಬರೇ ಬೆಳೆಯಬೇಕು, ಬೇರೆ ಯಾರೂ ಬೆಳೆಯಬಾರದು ಎಂಬ ಮನಸ್ಥಿತಿ ನಿಮ್ಮದು. ದಲಿತರನ್ನು ಬೆಳೆಸಿದ್ದೇವೆ ಎಂದು ಹೇಳಿಕೊಳ್ಳುತ್ತೀರಿ. ಆದರೆ ಎಷ್ಟು ಜನ ದಲಿತರಿಗೆ ಬೆಳಕಾಗಿದ್ದೀರಿ ಎಂಬುದನ್ನು ಹೇಳಿ” ಎಂದು ಸವಾಲು ಹಾಕಿದರು.

“ನಿಮ್ಮ ರಾಜಕೀಯ ಅಂತ್ಯದ ಕಾಲ ಆರಂಭವಾಗಿದೆ”

ತಮ್ಮನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ನಿಂದ ಯಾವುದೇ ರೀತಿಯ ಟೀಕೆ ಅಥವಾ ಪ್ರತಿಭಟನೆ ನಡೆದರೂ ಅದರಿಂದ ತಾವು ಹೆದರುವುದಿಲ್ಲ ಎಂದು ಚಲವಾದಿ ನಾರಾಯಣಸ್ವಾಮಿ ಹೇಳಿದರು.

“ನಮ್ಮನ್ನು ಟಾರ್ಗೆಟ್ ಮಾಡಿದರೆ ಏನೂ ಆಗುವುದಿಲ್ಲ. ನಿಮ್ಮ ನಾಟಕಗಳು ಮುಂದೆ ನಡೆಯುವುದಿಲ್ಲ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ನಿಮ್ಮ ಡ್ರಾಫ್ಟ್ ಡೌನ್‌ಫಾಲ್ ಶುರುವಾಗಿದೆ” ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ನ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ “ನಾವು ಗಾಂಧಿ ಮಕ್ಕಳು” ಎಂಬ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂದು ಉಲ್ಲೇಖಿಸಿದ ಅವರು, ಆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಮಾಡಿರುವ ಟೀಕೆಗಳನ್ನೂ ಖಂಡಿಸಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಬಲದ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಚಲವಾದಿ ನಾರಾಯಣಸ್ವಾಮಿ, “ಮುಂದೆ ಕುಮಾರಸ್ವಾಮಿ ಅವರೊಂದಿಗೆ ನಾವು ಎನ್‌ಡಿಎ ಅಡಿಯಲ್ಲಿ ಗೆದ್ದು 150 ಸೀಟುಗಳೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಆಗ ನಿಮಗೆ ಬುದ್ಧಿ ಕಲಿಸುತ್ತೇವೆ” ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular