ಜೆಡಿಎಸ್ ಪಕ್ಷ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ತಯಾರಿಯನ್ನು ನಡೆಸುತ್ತಿದೆ. ಜಿಬಿಎಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ. ಮಾಜಿ ಎಂಎಲ್‌ಸಿ ಹೆಚ್.ಎಂ.ರಮೇಶ್ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಮೇಶ್ ಗೌಡರಿಗೆ ನೇಮಕಾತಿಯ ಆದೇಶ ಪತ್ರವನ್ನು ನೀಡಿದ್ದಾರೆ. ಈ ನೇಮಕಾತಿ ಜಿಬಿಎ ಚುನಾವಣೆಯಲ್ಲಿ ಪಕ್ಷದ ಸಂಘಟನೆಗೆ ಬಹಳ ಮುಖ್ಯವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪಶ್ಚಿಮ, ಮತ್ತು ಪೂರ್ವ 5 ನಗರ ಪಾಲಿಕೆಗಳಾಗಿ ವಿಭಾಗ ಮಾಡಲಾಗಿದೆ. ಮುಂಬರುವ ಜಿಬಿಎ ಚುನಾವಣೆಗೆ ಪಕ್ಷದ ಸಂಘಟನೆ ಹಾಗೂ 5 ವಿಭಾಗವಾರು ಪಾಲಿಕೆಗಳ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ಆದೇಶದ ವಿವರ: ಜೆಡಿಎಸ್ ಪಕ್ಷ ನೇಮಕಾತಿ ಆದೇಶ ಪತ್ರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ತಾವೇನು ಕೆಲಸ ಮಾಡಿ ಹಲವಾರು ಹೋರಾಟಗಳನ್ನು ಮಾಡಿದ್ದು ನಾನು ಗಮನಿಸಿದ್ದೇನೆ.
ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಘನ ಸರ್ಕಾರದವರು ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪಶ್ಚಿಮ, ಮತ್ತು ಪೂರ್ವ ಐದು ಭಾಗಗಳಾಗಿ ವಿಂಗಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಪಕ್ಷದ ಸಂಘಟನೆ ಈ ಐದು ವಿಭಾಗವಾರು ಪಾಲಿಕೆಗಳನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಹಿನ್ನೆಲೆಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಆದ್ದರಿಂದ ನೀವು ಈ ಐದು ಕ್ಷೇತ್ರಗಳ ಅಧ್ಯಕ್ಷರುಗಳ ಕರ್ತವ್ಯ ನಿರ್ವಹಣೆಯಲ್ಲಿ ಏನಾದರೂ ಪಕ್ಷಕ್ಕೆ ಹಾನಿಯಾಗುವ ಘಟನೆಗಳು ಜರುಗಿದಲ್ಲಿ ಅದನ್ನು ಸರಿಪಡಿಸುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರವನ್ನು ನಿಮಗೆ ನೀಡಿದ್ದು, ಈ ಘಟಕಗಳ ನೇಮಕಾತಿ ವಿಚಾರವನ್ನು ಜಾತ್ಯತೀತ ಜನತಾದಳದ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರ ಗಮನಕ್ಕೆ ತರುವುದು.
ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಇರುವುದರಿಂದ ನೀವು ಈ ಐದು ವಿಭಾಗದ ಅಧ್ಯಕ್ಷರುಗಳನ್ನು ಕನಿಷ್ಠ 10 ದಿನಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ವಿಮರ್ಶೆ ಮಾಡಿ ಮುಂಬರುವ ಚುನಾವಣೆ ಎದುರಿಸಲಿಕ್ಕೆ ನಿಮ್ಮ ಹಿಂದಿನ ಅನುಭವದಿಂದ ನೀವು ಕರ್ತವ್ಯ ನಿರ್ವಹಿಸಬೇಕೆಂದು ಆದೇಶಿಸುತ್ತೇನೆ ಹಾಗೂ ಗ್ರೇಟರ್ ಬೆಂಗಳೂರು ಸಭೆಗಳಲ್ಲಿ ಭಾಗವಹಿಸಲು ವಿವಿಧ ಘಟಕದ ಅಧ್ಯಕ್ಷರುಗಳಿಗೆ ಆಮಂತ್ರಣ ನೀಡುವುದು.
ಈ ಐದು ವಿಭಾಗಳ ಅಧ್ಯಕ್ಷರ ಸಹಕಾರದೊಂದಿಗೆ ಗ್ರೇಟರ್ ಬೆಂಗಳೂರಿನ ಪಕ್ಷದ ಶಕ್ತಿಯನ್ನು ಬಲಪಡಿಸತಕ್ಕಂತಹ ಪ್ರಾಮುಖ್ಯತೆ ನೀವು ವಹಿಸಿಕೊಂಡು ಕೆಲಸ ಮಾಡಬೇಕು. ತಾವು ಈ ಗುರುತರವಾದ ಜವಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ, ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಕಾರ್ಯೋನ್ಮುಖರಾಗುತ್ತೀರೆಂದು ಆಶಿಸುತ್ತೇನೆ ಎಂದು ಆದೇಶ ಹೇಳಿದೆ.

