ಯಾದಗಿರಿ : ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಲ್ಲಿಕಾರ್ಜುನ ಮುತ್ಯಾಗೆ ಈಗ ಪೊಲೀಸರ ಬಿಸಿ ತಟ್ಟಿದೆ. ಸಿಪಿಐ ಶರಣಗೌಡ ನ್ಯಾಮಣ್ಣನವರ ನೇತೃತ್ವದಲ್ಲಿ ವಿಶೇಷ ತನಿಖೆ ಆರಂಭವಾಗಿದ್ದು, ಸತತ ಮೂರು ನೋಟಿಸ್’ಗಳಿಗೆ ಉತ್ತರ ನೀಡದಿದ್ದರೆ ಮುತ್ಯಾನನ್ನು ಅರೆಸ್ಟ್ ಮಾಡಲು ಪೊಲೀಸ್ ಇಲಾಖೆ ಸ್ಕೆಚ್ ಹಾಕಿದೆ.
ಹೌದು. ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ (POCSO) ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಪ್ರಕರಣದ ಸಮಗ್ರ ತನಿಖೆಗಾಗಿ ಈಗ ಇನ್ಸ್ಪೆಕ್ಟರ್ ಹಂತದ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸಿಪಿಐ (CPI) ಶರಣಗೌಡ ನ್ಯಾಮಣ್ಣನವರ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಇನ್ಸ್ಪೆಕ್ಟರ್ ಶರಣಗೌಡ ಅವರ ನೇತೃತ್ವದ ತಂಡವು ಈ ಹೈಪ್ರೊಫೈಲ್ ಪ್ರಕರಣದ ಎ ಟು ಝೆಡ್ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಕಲೆಹಾಕಲಿದೆ.
ಮೊದಲು ನೋಟಿಸ್, ಆಮೇಲೆ ಅರೆಸ್ಟ್!
ತನಿಖಾ ತಂಡವು ಕಾನೂನು ಪ್ರಕ್ರಿಯೆಯ ಭಾಗವಾಗಿ ಮೊದಲು ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ಸತತ ಮೂರು ಬಾರಿ ನೋಟಿಸ್ ನೀಡಲು ನಿರ್ಧರಿಸಿದೆ.ವಿಚಾರಣೆಗೆ ಹಾಜರಾಗುವಂತೆ ಮೊದಲ ನೋಟಿಸ್ ನೀಡಲಾಗುತ್ತದೆ.ಒಂದು ವೇಳೆ ಈ ನೋಟಿಸ್ಗಳಿಗೆ ಆರೋಪಿಯು ಸೂಕ್ತವಾಗಿ ಸ್ಪಂದಿಸದಿದ್ದರೆ ಅಥವಾ ವಿಚಾರಣೆಗೆ ಗೈರುಹಾಜರಾದರೆ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಲಿದ್ದಾರೆ. ನೋಟಿಸ್’ಗೆ ಯಾವುದೇ ಉತ್ತರ ನೀಡದಿದ್ದಲ್ಲಿ ಅಥವಾ ತನಿಖೆಗೆ ಅಸಹಕಾರ ತೋರಿದಲ್ಲಿ ಆರೋಪಿಯನ್ನು ಬಂಧಿಸಲು (Arrest) ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಸಂತ್ರಸ್ತೆಯ ಹೇಳಿಕೆ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದು, ಮಲ್ಲಿಕಾರ್ಜುನ ಮುತ್ಯಾಗೆ ಬಂಧನದ ಭೀತಿ ಎದುರಾಗಿದೆ.

