ಜಾರ್ಖಂಡ್: ಜಾರ್ಖಂಡ್‌ನ ಜಂಶೆಡ್‌ಪುರ ವ್ಯಾಪ್ತಿಯ ಪೆಟ್ರೋಲ್ ಬಂಕ್‌ನಲ್ಲಿ ವಾಹನಕ್ಕೆ CNG ಇಂಧನ ತುಂಬಿಸುತ್ತಿದ್ದ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ 24 ವರ್ಷದ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಘಾತ ಮೂಡಿಸಿದೆ.
ಜಂಶೆಡ್‌ಪುರ ಜಿಲ್ಲೆಯ ಆರ್.ಕೆ. ಜೈನ್ ಭಾರತ್ ಪೆಟ್ರೋಲಿಯಂ ಬಂಕ್‌ನಲ್ಲಿ ತುಷಾರ್ ಕಮ್ರಿ (24) ಎಂಬ ಯುವಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 27ರ ರಾತ್ರಿ ಸುಮಾರು 10.40ರ ವೇಳೆಗೆ ಬಂಕ್‌ಗೆ ಬಂದಿದ್ದ ವಾಹನಕ್ಕೆ ಅವರು CNG ಗ್ಯಾಸ್ ತುಂಬಿಸುತ್ತಿದ್ದರು.
ಈ ವೇಳೆ ಇದ್ದಕ್ಕಿದ್ದಂತೆ CNG ಫಿಲ್ಲಿಂಗ್ ಪೈಪ್ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದೆ. ಪರಿಣಾಮ ಗ್ಯಾಸ್ ವೇಗವಾಗಿ ಸೋರಿಕೆಯಾಗಿದ್ದು, ಪೆಟ್ರೋಲ್ ಬಂಕ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಏನಾಗುತ್ತಿದೆ ಎಂಬುದು ತಿಳಿಯದೆ ಭಯಗೊಂಡ ಗ್ರಾಹಕರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದಾರೆ.
ತಲೆಗೆ ಬಡಿದ ಪೈಪ್‌ನ ಲೋಹದ ನಾಜಲ್
ಸ್ಫೋಟದ ರಭಸಕ್ಕೆ CNG ಪೈಪ್‌ನ ಲೋಹದ ನಾಜಲ್ ತುಷಾರ್ ಕಮ್ರಿ ಅವರ ತಲೆಗೆ ಬಲವಾಗಿ ಬಡಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದೊಂದಿಗೆ ಅವರು ನೆಲಕ್ಕೆ ಬಿದ್ದಿದ್ದಾರೆ.
ತಕ್ಷಣವೇ ಸಹೋದ್ಯೋಗಿಗಳು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತುರ್ತು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ತುಷಾರ್ ಕಮ್ರಿ ಮೃತಪಟ್ಟಿದ್ದಾರೆ.
CCTVಯಲ್ಲಿ ಸೆರೆಯಾದ ಭೀಕರ ದೃಶ್ಯ
ಪೆಟ್ರೋಲ್ ಬಂಕ್‌ನಲ್ಲಿದ್ದ CCTV ಕ್ಯಾಮೆರಾಗಳಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿವೆ. ಪೈಪ್ ಸ್ಫೋಟಗೊಂಡು ಗ್ಯಾಸ್ ಸೋರಿಕೆಯಾಗುವುದು ಹಾಗೂ ಭಯಗೊಂಡ ಜನರು ಸ್ಥಳದಿಂದ ಓಡಿಹೋಗುತ್ತಿರುವ ದೃಶ್ಯಗಳು CCTVಯಲ್ಲಿ ದಾಖಲಾಗಿವೆ.
ಮಾಹಿತಿ ತಿಳಿದು ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. CNG ಪೈಪ್ ಸ್ಫೋಟಕ್ಕೆ ನಿಖರ ಕಾರಣವೇನು? ಬಂಕ್ ನಿರ್ವಹಣೆಯವರು ಸುರಕ್ಷತಾ ಮಾನದಂಡಗಳನ್ನು ಪಾಲಿಸಿದ್ದಾರೆಯೇ? ಅಥವಾ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣವೇ? ಎಂಬ ಹಲವು ಆಯಾಮಗಳಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

