ಮೈಸೂರು: ಸದ್ಯಕ್ಕೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ. ಇನ್ನು ಮೂರು ತಿಂಗಳು ಕಾರ್ಡ್ ಗಳನ್ನು ರದ್ದು ಮಾಡದಂತೆ ಸೂಚನೆ ನೀಡಿರುವುದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯಕ್ಕೆ ಯಾವ ಬಿಪಿಎಲ್ ಎಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ. ಇನ್ನು ಮೂರು ತಿಂಗಳ ಕಾಲ ಯಾವ ಕಾರ್ಡ್ ಮಾಡದಂತೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಬಿಪಿಎಲ್ ನಲ್ಲಿ ಅನರ್ಹರು ಇದ್ದಾರೆ ಎನ್ನುವುದು ಗೊತ್ತಿದೆ. ಬಿಪಿಎಲ್ ಮಾನದಂಡ ಇಂದಿನ ಆರ್ಥಿಕ ವ್ಯವಸ್ಥೆಗೆ ಸರಿಹೋಗುತ್ತಿಲ್ಲ. ಮಾನದಂಡ ಬದಲಾವಣೆ ಮಾಡಬೇಕಿದೆ. ಇನ್ನು ಅನೇಕರು ಬಿಪಿಎಲ್ ಕಾರ್ಡ್ ನಿಂದ ಹೊರಗುಳಿದಿದ್ದು ಅವರನ್ನು ಕೂಡ ಬಿಪಿಎಲ್ ಗೆ ಸೇರ್ಪಡೆ ಮಾಡಬೇಕಿದೆ. ಏಕಾಏಕಿ ಕಾರ್ಡ್ ಡಿಲೀಟ್ ಮಾಡಿದರೆ ಬಡವರಿಗೆ ಅನ್ಯಾಯವಾಗುತ್ತದೆ. ರಾಜ್ಯದಲ್ಲಿ ಸದ್ಯಕ್ಕೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ. ಮೂರು ತಿಂಗಳ ನಂತರ ಇದಕ್ಕೊಂದು ಸ್ಪಷ್ಟ ರೂಪ ಕೊಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

