ಬೆಂಗಳೂರು : ಅತ್ಯಾಚಾರ ಕೇಸ್’ ನಲ್ಲಿ ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ ದೋಷಿ ಎಂದು ಕೋರ್ಟ್ ನಿನ್ನೆ ಮಹತ್ವದ ತೀರ್ಪು ಪ್ರಕಟಿಸಿದ್ದು, ಇಂದು ಮಧ್ಯಾಹ್ನ 2 :45 ಕ್ಕೆ ಆದೇಶ ಕಾಯ್ದಿರಿಸಿ ಕೋರ್ಟ್ ಆದೇಶಿಸಿದೆ .ಇಂದು ಮಧ್ಯಾಹ್ನ 2 :45 ಕ್ಕೆ ಕೋರ್ಟ್ ಪ್ರಜ್ವಲ್ ರೇವಣ್ಣಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಸಂಸದನಾಗಿ ಇಂತಹ ನೀಚ ಕೃತ್ಯ : SPP ವಾದ
“(ಸಂತ್ರಸ್ತೆ) ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಆತ ಒಬ್ಬ ಸಂಸದನಾಗಿ ಇಂತಹ ನೀಚ ಕೃತ್ಯ ಎಸಗಿದ್ದಾನೆ. ,ಮನೆಕೆಲಸದಳ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದು ಆತನ ಮನಸ್ಥಿತಿ ಹೇಗಿತ್ತು ಎಂಬುದನ್ನು ತೋರಿಸುತ್ತದೆ. ಆತನಿಗೆ ನೀಡುವ ಶಿಕ್ಷೆ ಬೇರೆಯವರಿಗೆ ಎಚ್ಚರಿಕೆ ಸಂದೇಶವಾಗಬೇಕು ಎಂದು” ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ಬಿ.ಎನ್ ಜಗದೀಶ್ ವಾದ ಮಂಡಿಸಿದ್ದಾರೆ .ಹಣ, ಅಧಿಕಾರವಿರುವವರಿಗೆ ಕಡಿಮೆ ಶಿಕ್ಷೆ ಪ್ರಕಟ ಮಾಡಬಾರದು. ಪ್ರಭಾವಿಗಳಿಗೆ ಕಡಿಮೆ ಶಿಕ್ಷೆ ಎನ್ನುವ ತಪ್ಪು ಸಂದೇಶ ಹೋಗಬಾರದು ಎಂದು ವಾದ ಮಂಡಿಸಿದರು.
”ಸಂತ್ರಸ್ತೆಯ ವಿಡಿಯೋ ವೈರಲ್ ಆಗಿ ಆಕೆ ಎಲ್ಲೂ ಕೂಡ ದುಡಿಯಲು ಹೋಗದಂತಾಗಿದೆ. ಪ್ರಜ್ವಲ್ ರೇವಣ್ಣಗೆ ದಂಡ ವಿಧಿಸಿ ಅದರ ದೊಡ್ಡ ಭಾಗ ಮಹಿಳೆಗೆ ನೀಡಬೇಕು. ಪ್ರಜ್ವಲ್ ರೇವಣ್ಣ ಕರೋಡ್ ಪತಿಯಲ್ಲ” ಎಂದು ಕೋರ್ಟ್ ನಲ್ಲಿ ಎಸ್ ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿದರು.
ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ವಾದ
‘’ಪ್ರಜ್ವಲ್ ವಯಸ್ಸು ಕೇವಲ 34 ವರ್ಷ. ಆತನ ತಾತ ಮಾಜಿ ಪ್ರಧಾನಿ. ಇಷ್ಟು ದಿನದ ಆತನ ರಾಜಕೀಯ ಸ್ಥಾನಮಾನ ಹಾಳು ಮಾಡಬಾರದು. ಅದು ಚುನಾವಣೆ ವೇಳೆ ಆತನ ವೀಡಿಯೋ ಹರಿಬಿಡಲಾಗಿದೆ. ರಾಜಕೀಯ ಭವಿಷ್ಯ ಹಾಳು ಮಾಡುವ ಉದ್ದೇಶದಿಂದಲೇ ವಿಡಿಯೋ ಹರಿಬಿಡಲಾಗಿದೆ. ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಆದೇಶ ಹೊರಡಿಸಬೇಕು. ಸಂತ್ರಸ್ತೆಗಿಂತ ಅಪರಾಧಿಗೆ ಹೆಚ್ಚು ಹಾನಿಯಾಗಿದೆ’’ ಎಂದು ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ವಾದ ಮಂಡಿಸಿದ್ದಾರೆ.
ಪ್ರಕರಣ ಹಿನ್ನೆಲೆ
2024ರ ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಮೈಸೂರಿನ ಕೆ ಆರ್ ನಗರದ ಸಂತ್ರಸ್ತ ಮಹಿಳೆ ಈ ಸಂಬಂಧ ದೂರು ನೀಡಿದ್ದರು. ಮಹಿಳೆ ನಿಡಿದ್ದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376(2)(2), 376(2)(8), 506, 354-2, 354(2), 354(2), 354(2) 2 3 3 ಸೆಕ್ಷನ್ 66ಇ ಅಡಿ ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ನಂತರ ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ತಂಡದ ಅಧಿಕಾರಿಗಳು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2,000 ಪುಟಗಳ ಚಾರ್ಜ್ ಶೀಟನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2024ರ ಅಂತ್ಯದಲ್ಲಿ ಈ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.