ಕರ್ನಾಟಕ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ರಾಜ್ಯದ ವಿವಿಧ ಜೈಲುಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಅವರು ಕಾರಾಗೃಹದ ಕೈದಿಗಳ ಭೇಟಿಗೆ ಹೊಸ ನಿಯಮವನ್ನು ರೂಪಿಸಿದ್ದಾರೆ.
ಜೈಲು ಕೈದಿಗಳ ಭೇಟಿಗೆ ಇದ್ದ ನಿಯಮನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕೈಪಿಡಿ 2021ರ ಅಧ್ಯಾಯ 31ರ ಅಡಿ ತುರ್ತು ಮತ್ತು ವಿಶೇಷ ಸಂದರ್ಭದಲ್ಲಿ ಕೈದಿಗಳ ಭೇಟಿಗೆ ವಿಶೇಷ ಅವಕಾಶ ನೀಡುವ ಅಧಿಕಾರವಿದೆ.
ಆದರೆ ಕೆಲವು ಜೈಲುಗಳಲ್ಲಿ ಈ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡುಬಂದ ಹಿನ್ನಲೆಯಲ್ಲಿ ಡಿಜಿಪಿ ನಿಯಮಗಳನ್ನು ಕಠಿಣಗೊಳಿಸಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜೈಲಿನ ಸಿಬ್ಬಂದಿಗಳಿಗೆ ಕಡಕ್ ಸೂಚನೆಗಳನ್ನು ನೀಡಿದ್ದಾರೆ.
7 ಪ್ರಮುಖ ನಿಯಮಗಳು
- ಭೇಟಿಗೂ ಮುನ್ನ ಜೈಲು ಮುಖ್ಯಸ್ಥರಿಂದ ಕಡ್ಡಾಯವಾಗಿ ಅನುಮತಿ (ಲಿಖಿತ) ಪಡೆಯಬೇಕಿದೆ.
- ಭೇಟಿಯಿಂದ ಜೈಲಿನ ನಿಯಮ, ಶಿಸ್ತು, ಭದ್ರತೆಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
- ಜೈಲು ಆವರಣದೊಳಗೆ ನಿಗದಿತ ಸಂದರ್ಶನ ಕೊಠಡಿಯಲ್ಲಿ ಭೇಟಿ. ಈ ಸಮಯದಲ್ಲಿ ಜೈಲು ಅಧಿಕಾರಿಯೊಬ್ಬರ ಮೇಲ್ವಿಚಾರಣೆ ಇರಬೇಕು. ಈ ಭೇಟಿಯ ಅವಧಿ 30 ನಿಮಿಷ ಮೀರಬಾರದು.
- ಒಬ್ಬ ಕೈದಿ ಭೇಟಿ ಮಾಡಲು ಗರಿಷ್ಠ 5 ಜನರಿಗೆ ಮಾತ್ರ ಅವಕಾಶ. ಇದರಲ್ಲಿ ಕುಟುಂಬದವರ, ಸಂಬಂಧಿಕರು, ಸ್ನೇಹಿತರು ಸೇರಿರಬಹುದು.
- ಭೇಟಿಯ ಸಂದರ್ಭದಲ್ಲಿ ಯಾವುದೇ ಅಶಿಸ್ತು, ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣವೇ ಭೇಟಿ ರದ್ದುಗೊಳಿಸುವ ಅಧಿಕಾರ ಜೈಲು ಮುಖಸ್ಥರಿಗೆ ಇರುತ್ತದೆ. ಇದಕ್ಕೆ ಅವರು ಕಾರಣವನ್ನು ಲಿಖಿತವಾಗಿ ಸಲ್ಲಿಸಬೇಕು. ಪ್ರತಿಯೊಂದು ವಿಶೇಷ ಭೇಟಿಯನ್ನು ಉನ್ನತ ಅಧಿಕಾರಿಗಳು ಆಗಾಗ ಪರಿಶೀಲನೆ ಮಾಡಬೇಕು.
- ಒಂದು ವೇಳೆ ಯಾವದೇ ಭೇಟಿ 4 ಸಂದರ್ಭಗಳಿಗೆ ಒಳಪಡದಿದ್ದರೆ ಮತ್ತು ಭೇಟಿ ಅತ್ಯಂತ ಅನಿವಾರ್ಯವೆಂದು ಕಂಡುಬಂದಲ್ಲಿ ಅಂಥವರು ನೇರವಾಗಿ ಕಾರಾಗೃಹ ಇಲಾಖೆ ಡಿಜಿಪಿಗೆ ಅರ್ಜಿ ಸಲ್ಲಿಸಬೇಕು.
- ಭೇಟಿ ನೀಡಲು ಉದ್ದೇಶಿಸಿರುವ ದಿನಾಂಕಕ್ಕಿಂತ ಕನಿಷ್ಠ 2 ಕೆಲಸದ ದಿನಗಳ ಮೊದಲು ಈ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಯಾವಾಗ ವಿಶೇಷ ಭೇಟಿಗೆ ಅವಕಾಶ?
- ಕೈದಿ ಗಂಭೀರ ಕಾಯಿಲೆ ಅಥವ ತೀವ್ರಗಾಗಿ ಗಾಯಗೊಂಡು ಚಲನವಲನ ಸಾಧ್ಯವಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದರೆ ತಿಂಗಳಿಗೊಮ್ಮೆ ಮಾತ್ರ ವಿಶೇಷ ಭೇಟಿಗೆ ಅವಕಾಶ.
- ಕೈದಿಯ ಹತ್ತಿರದ ಕುಟುಂಬ ಸದಸ್ಯರು ಮರಣ ಹೊಂದಿದಾಗ ಅಥವ ಕುಟುಂಬದಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಾದಾಗ ಮಾನವೀಯ ನೆಲೆಯಲ್ಲಿ ಭೇಟಿಗೆ ಅವಕಾಶ.
- ಶಿಕ್ಷೆ ಮುಗಿದು ಅಥವ ಅವಧಿಗೆ ಮುನ್ನ ಬಿಡುಗಡೆಯಾಗುವ ಅರ್ಹತೆ ಹೊಂದಿರುವ ಕೈದಿಗಳಿಗೆ, ಅವರ ಬಿಡುಗಡೆಯ ಎರಡು ತಿಂಗಳ ಮೊದಲು ಭೇಟಿಗೆ ಅವಕಾಶ.
- ಇದು ಕೈದಿಯ ಪುನರ್ವಸತಿ, ಉದ್ಯೋಗ, ಆಪ್ತ ಸಮಾಲೋಚನೆ ಮತ್ತು ವಾಸಸ್ಥಳದ ಸಿದ್ಧತೆಗೆ ಮಾತ್ರ ಸೀಮಿತ. ಭೇಟಿ ಮಾಡಲು ಬರುವ ವಿಕಲಚೇತನರಾಗಿದ್ದರೆ ಅಥವ ಗರ್ಭಿಣಿ ಮಹಿಳೆಯಾಗಿದ್ದರೆ ಅಂತಹ ಸಂದರ್ಭದಲ್ಲಿ ವಿಶೇಷ ಭೇಟಿಗೆ ಅವಕಾಶ.

