ಆನೇಕಲ್: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಐಷಾರಾಮಿ ಜಾಗ್ವಾರ್ ಕಾರನ್ನು ನೇರವಾಗಿ ಪೆಟ್ರೋಲ್ ಬಂಕ್‌ಗೆ ನುಗ್ಗಿಸಿದ್ದಾನೆ. ಘಟನೆಯಲ್ಲಿ ಕಾರು ಹಾಗೂ ಪೆಟ್ರೋಲ್ ಬಂಕ್ ಎರಡಕ್ಕೂ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಚಾಲಕ ಕಂಠಪೂರ್ತಿ ಕುಡಿದು ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಯುವತಿಯೊಂದಿಗೆ ಕಾರಿನಲ್ಲಿ ಬಂದಿದ್ದ ಸಂಜಯ್ ಎಂಬಾತ, ಮೊದಲು ಪೆಟ್ರೋಲ್ ಬಂಕ್‌ನ ಸಿಬ್ಬಂದಿ ಗುಡ್ಡು ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಪೆಟ್ರೋಲ್ ಬಂಕ್ ಗೆ ಕಾರು ಅಪ್ಪಳಿಸಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಯುವಕ ಮತ್ತು ಯುವತಿ ಇಬ್ಬರೂ ಹೊರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಬ್ಬಂದಿ ಗುಡ್ಡು ಕುಮಾರ್ ಅವರಿಗೆ ಕಾಲಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು, ಕಾರು ಚಾಲಕ ಸಂಜಯ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಉದ್ದೇಶಪೂರ್ವಕವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಯಶಸ್ವಿಯಾಗಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಗಳೂರಿನ ಅಮೇಜಾನ್ ಕಚೇರಿ ಬಳಿ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟ; ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರು: ಬೆಂಗಳೂರಿನ ಅಮೇಜಾನ್ ಕಚೇರಿಯ ಗೇಟ್ ಬಳಿ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟಗೊಂಡು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯಿರುವ ಅಮೇಜಾನ್ ಕಚೇರಿಯ ಗೇಟ್ ನಂಬರ್ 3ರ ಬಳಿ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಇಬ್ಬರು ಹಾರಿ ಬಿದ್ದಿದ್ದಾರೆ.
ಘಟನೆಯಲ್ಲಿ ಬೆಂಕಿ ತಗುಲಿ ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸ್ಫೋಟದ ವೇಳೆ ನೆಲಕ್ಕೆ ಬಿದ್ದ ಪರಿಣಾಮವಾಗಿ, ಓರ್ವ ಪಾದಚಾರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೇ ಅವರ ಕೈಗಳಿಗೆ ತೀವ್ರ ಸುಟ್ಟಗಾಯಗಳಾಗಿವೆ. ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾಳೆ ಎಂದು ವರದಿಯಾಗಿದೆ.ಸ್ಪೋಟಗೊಳ್ಳುತ್ತಿರುವ ದೃಶ್ಯ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸ್ಫೋಟವು ಪಾದಚಾರಿ ಮಾರ್ಗಗಳಲ್ಲಿರುವ, ಅದರಲ್ಲೂ ಶಾಲಾ ಮಕ್ಕಳು ಮತ್ತು ರಸ್ತೆಯನ್ನು ಬಳಸುವ ಇತರ ದುರ್ಬಲ ವರ್ಗದವರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿರುವ ಜಂಕ್ಷನ್ ಬಾಕ್ಸ್ ಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.
2022ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಟ್ರಾನ್ಸ್‌ಫಾರ್ಮರ್ ಸ್ಫೋಟ ಪ್ರಕರಣವನ್ನು ಈ ಘಟನೆ ನೆನಪಿಸಿದೆ. ಅಂದು ನಡೆದ ದುರ್ಘಟನೆಯಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿದ್ದರು. ಆ ಪ್ರಕರಣದ ತನಿಖೆಯಲ್ಲಿ, ಸ್ಫೋಟಕ್ಕೂ ಮುನ್ನವೇ ಟ್ರಾನ್ಸ್‌ಫಾರ್ಮರ್ ಕುರಿತು ಬೆಸ್ಕಾಂಗೆ ದೂರು ಬಂದಿರುವುದು ಬೆಳಕಿಗೆ ಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನಿರ್ಲಕ್ಷ್ಯದ ಆರೋಪ ಕೇಳಿಬಂದಿತ್ತು.
ಪಾದಚಾರಿ ಮಾರ್ಗಗಳಲ್ಲಿ ಇರಿಸಲಾದ ವಿದ್ಯುತ್ ಉಪಕರಣಗಳು ಎಷ್ಟರ ಮಟ್ಟಿಗೆ ಸುರಕ್ಷಿತ? ಅವುಗಳಿಂದ ಅಪಾಯವುಂಟಾದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

