HomeKarnatakaಮನೆ ಇಲ್ಲದವರಿಗೆ ಗುಡ್ ನ್ಯೂಸ್: ರಾಜ್ಯದ 15 ಲಕ್ಷ ಫಲಾನುಭವಿಗಳಿಗೆ ಉಚಿತವಾಗಿ ನಿವೇಶನ ಹಂಚಿಕೆ

ಮನೆ ಇಲ್ಲದವರಿಗೆ ಗುಡ್ ನ್ಯೂಸ್: ರಾಜ್ಯದ 15 ಲಕ್ಷ ಫಲಾನುಭವಿಗಳಿಗೆ ಉಚಿತವಾಗಿ ನಿವೇಶನ ಹಂಚಿಕೆ

ತುಮಕೂರು: ರಾಜ್ಯದ 15 ಲಕ್ಷ ಫಲಾನುಭವಿಗಳಿಗೆ ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಪ್ರಜಾ ಸೇವಾ ಇಲಾಖೆ ಹಾಗೂ ತುಮಕೂರು ಜಿಲ್ಲಾಡಳಿತದ ವತಿಯಿಂದ ಗುಬ್ಬಿ ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ ‘ಪ್ರಜಾ ಸೇವಾ ಅಭಿಯಾನ ಜನಸಭೆ’ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದ 15 ಲಕ್ಷ ಫಲಾನುಭವಿಗಳಿಗೆ ಡಿಸೆಂಬರ್ ಒಳಗೆ 30*40 ಅಡಿ ಅಳತೆ ನಿವೇಶನಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿ ತಾಲೂಕಿನಲ್ಲಿ 4 ರಿಂದ 5 ಸಾವಿರ ನಿವೇಶನ ಹಂಚಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಒಂದು ಜಿಲ್ಲೆಯಲ್ಲಿ ಕನಿಷ್ಠ 50 ಸಾವಿರ ನಿವೇಶನಗಳನ್ನು ಗುರುತಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ಕಂದಾಯ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಹೊಸ ಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು ಎಂಬುದು ನನ್ನ ಆಶಯ.‌ ಬಡವರಿಗೆ 30×40 ಅಳತೆಯ ನಿವೇಶನವನ್ನು ಉಚಿತವಾಗಿ ನೀಡಲಾಗುವುದು.‌ ರಾಜ್ಯಾದ್ಯಂತ 15 ಲಕ್ಷಕ್ಕೂ ಹೆಚ್ಚು ನಿವೇಶನ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಬಹಳಷ್ಟು ಜನರಿಗೆ ಜಾಗ ಇಲ್ಲ, ಮನೆಯೂ ಇಲ್ಲ. ನಿವೇಶನ ನೀಡಿದರೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಅವರ ಬದುಕಲ್ಲಿ ನೆಮ್ಮದಿ ಮೂಡುತ್ತದೆ. ಲಭ್ಯ ಇರುವ ಸರ್ಕಾರಿ ಜಾಗದಲ್ಲಿ ನಿವೇಶನ ಸಿದ್ಧಪಡಿಸಿ, ಬಡವರಿಗೆ ಕೊಡುವ ಕೆಲಸ ಮಾಡಲು ಹೊರಟಿದ್ದೇವೆ. ಶಾಸಕರ ಮೂಲಕ ಗ್ರಾಮ ಸಭೆಗಳನ್ನು ಮಾಡಿ, ಬಡವರಿಗೆ ನಿವೇಶನ ಹಂಚಿಕೆ‌ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಸರ್ಕಾರದ ಆಡಳಿತ ವ್ಯವಸ್ಥಿತವಾಗಿ ನಡೆಯಬೇಕು, ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ‌ ಮಾಡಬೇಕು. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗುತ್ತಿದೆ ಎಂದರು.

ಸೆಪ್ಟೆಂಬರ್ 5 ನಮ್ಮೆಲ್ಲರಿಗೂ ಆದರ್ಶಪ್ರಾಯರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಇಂದು ಇಡೀ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅದೇ ದಿನ ಪ್ರಜಾಸೇವಾ ಅಭಿಯಾನ ಆಚರಿಸಬೇಕು ಎಂದು ಸಿಎಂ ಅವರು ಕರೆ ಕೊಟ್ಟಿದ್ದರು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ನೂತನ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ. ಯಾವುದೇ ಇಲಾಖೆಯ ಸಮಸ್ಯೆಗಳನ್ನು ನೇರವಾಗಿ ಈ‌ ಇಲಾಖೆಯಡಿ ದಾಖಲಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸಕಾಲದಲ್ಲಿ ಪರಿಹರಿಸಿಕೊಡುವ ಕೆಲಸ ಮಾಡಿಕೊಡಬೇಕು ಎಂದರು.

ಈ ಕಾರ್ಯಕ್ರಮ ಇಂದಿನ ದಿನಕ್ಕೆ‌ ಮಾತ್ರ ಸೀಮಿತವಾಗಿಲ್ಲ.‌ ಪ್ರತಿ ತಿಂಗಳು ಮೊದಲನೆ ಮತ್ತು ಮೂರನೇ ಶನಿವಾರದಂದು ಪ್ರತಿ ತಾಲ್ಲೂಕಿನಲ್ಲಿ ಅಭಿಯಾನ ನಡೆಸಲಾಗುತ್ತದೆ. ತಾಲೂಕು ಮುಗಿದ ಬಳಿಕ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಅಭಿಯಾನ ಸಭೆ ನಡೆಸಲಾಗುವುದು. ಇದು ನಿರಂತರವಾಗಿ ನಡೆಯುತ್ತದೆ. ಇವತ್ತು ಅರ್ಜಿ ನೀಡಲು ಆಗದವರು ಮೂರನೇ ಶನಿವಾರ ಅರ್ಜಿ ಸಲ್ಲಿಸಬಹುದು ಎಂದರು.

ಗುಬ್ಬಿ ಶಾಸಕರಾದ ಶ್ರೀನಿವಾಸ್ ಅವರು ಜನಗಳ‌ ಮಧ್ಯೆ ಇದ್ದು ಕೆಲಸ‌ ಮಾಡುವ ಶಾಸಕ. ಅಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬರುವುದಿಲ್ಲ‌ ಎನ್ನಿಸುತ್ತದೆ. ಶ್ರೀನಿವಾಸ್ ಅವರು ಕ್ಷೇತ್ರದ ಕೆಲಸದ ವಿಚಾರದಲ್ಲಿ ಗುಬ್ಬಿ ತಾಲ್ಲೂಕಿನ ಜನರೊಂದಿಗೆ ಗುರುತಿಸಿಕೊಂಡಿದ್ದಾರೆ. ಸಾರ್ವಜನಿಕರಿಂದ ಅರ್ಜಿ ಬಂದಾಗ, ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಪರಿಹರಿಸಿದರೆ ಅವರಿಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಕೆಲಸ ಮಾಡಲಿದೆ. ಸಮಸ್ಯೆಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದರೆ, ಕರ್ನಾಟಕ ಒಳ್ಳೆಯ ಆಡಳಿತಕ್ಕೆ ಹೆಸರುವಾಸಿಯಾಗುತ್ತದೆ. ಜನರ ಸಮಸ್ಯೆಗಳನ್ನು ಬಹುಬೇಗ ಬಗೆಹರಿಸಿದರೆ ಆಡಳಿತ ಚುರುಕಾಗಿದೆ ಎಂಬ ಮಾತಿಗೆ ಅರ್ಥ ಬರುತ್ತದೆ ಎಂದರು.

ನಮ್ಮ‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆರಂಭದಲ್ಲಿ ಬಹಳಷ್ಟು ಟೀಕೆಗಳು ಕೇಳಿಬಂದವು. ಯಾರಿಗೆ ಸಹಾಯ ಹಸ್ತದ ನಿರೀಕ್ಷೆಯಿತ್ತು, ಸರ್ಕಾರದಿಂದ ಸಹಾಯ ಬೇಕಾಗಿತ್ತು ಅಂತವರಿಗೆ ಗ್ಯಾರಂಟಿ ಯೋಜನೆಗಳು ಹೆಚ್ಚು ಅನುಕೂಲವಾಗಿವೆ. ಕೂಲಿ ಮಾಡುವವರಿಗೆ, ಬಡವರಿಗೆ ಜೀವನಕ್ಕೆ ಸಹಾಯವಾಗುತ್ತಿದೆ. ಕೂಲಿ ಮಾಡುವ ಹೆಣ್ಣು ಮಗಳಿಗೆ ಎರಡು ಸಾವಿರ ರೂ. ದೊಡ್ಡದು. ಆಕೆಗೆ ಎರಡು ಸಾವಿರ ರೂಪಾಯಿ ಎರಡು ಲಕ್ಷದ ಮೌಲ್ಯಕ್ಕೆ ಸಮ.‌ ಅವಶ್ಯಕತೆ ಇರುವ ಎಲ್ಲ ಮಹಿಳೆಯರು ಎರಡು ಸಾವಿರ ರೂಪಾಯಿ ಪಡೆಯುತ್ತಿದ್ದಾರೆ.‌ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಪಡೆಯುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘ ತಿಳಿಸಿದೆ. ಅವರಿಗೆ ಧನ್ಯವಾದಗಳು ಎಂದರು.

ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಾಗ ಅಜ್ಜಿಯೊಬ್ಬರಿಗೆ ಎರಡು ಸಾವಿರ ರೂ. ಬರುತ್ತದೆಯೇ ಎಂದು ವಿಚಾರಿಸಿದೆ. ಆಗ ಆಕೆ ಎರಡು ಸಾವಿರ ರೂ. ಹಣ ನನಗೆ ಔಷಧ ತೆಗೆದುಕೊಳ್ಳಲು ಸಹಾಯವಾಗುತ್ತಿದೆ. ನಾನು ಬದುಕಿರುವುದೇ ಎರಡು ಸಾವಿರ ರೂ. ಹಣದಿಂದ ಎಂಬ ಮಾತನ್ನು ಹೇಳಿದರು. ಇದನ್ನು ಕೇಳಿ ನಮ್ಮ ಕಾರ್ಯಕ್ರಮ ಸಾರ್ಥಕವೆಂಬ ಭಾವನೆ ಮೂಡಿತ್ತು ಎಂದರು.

ಹೆಣ್ಣುಮಕ್ಕಳಿಗೆ ಬಸ್‌ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. 800 ಕೋಟಿ ಟ್ರಿಪ್ ನಮ್ಮ ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಪ್ರೇರಣೆ ಪಡೆದು ಅಮೆರಿಕದ ನಗರವೊಂದರ ಮೇಯರ್ ಅಲ್ಲಿನ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ‌ ಕಲ್ಪಿಸಿದ್ದಾರೆ. ಪ್ರಧಾನಮಂತ್ರಿಯವರು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಹೊಡೆದರು. ಎಲ್ಲ ರಾಜ್ಯದಲ್ಲೂ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಬೇರೆಬೇರೆ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ‌. ಇದು ನಮ್ಮ‌ ಗ್ಯಾರಂಟಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಕಂದಾಯ ಇಲಾಖೆಯನ್ನು ಸಿಎಂ ಅವರು ನನಗೆ ವಹಿಸಿದ್ದಾರೆ. ದೇಶದಲ್ಲಿ ಹೊಸಹೊಸ ಆವಿಷ್ಕಾರ ಮಾಡುವಾಗ ಕರ್ನಾಟಕ ಮುಂದಿದೆ. ನಮ್ಮ ರಾಜ್ಯದ ಕಂದಾಯ ಇಲಾಖೆಯಲ್ಲಿ ಆಗಿರುವಂತಹ ದೊಡ್ಡ ಬದಲಾವಣೆಗಳು ದೇಶದಲ್ಲಿ ಬೇರೆಲ್ಲೂ ಆಗಿರಲಿಲ್ಲ. ದೇವರಾಜ್ ಅರಸು ಅವರ ಅವಧಿಯಲ್ಲಿ, ಕಷ್ಟಪಟ್ಟು ಜಮೀನು ಉಳುಮೆ ಮಾಡುವವರಿಗೆ ಜಮೀನು ನೀಡಬೇಕು ಎಂಬ ನಿಟ್ಟಿನಲ್ಲಿ “ಉಳುವವನೆ ಭೂಮಿಯ ಒಡೆಯ” ಎಂಬ ಕಾರ್ಯಕ್ರಮ ಜಾರಿಗೆ ತಂದರು. ಕೂಲಿ ಮಾಡುವ ಬಡವನಿಗೆ ಭೂಮಿ ಸಿಗಬೇಕು ಎಂಬುದು ಉದ್ದೇಶವಾಗಿತ್ತು ಎಂದರು.

 ಇಡೀ ರಾಜ್ಯದಲ್ಲಿ ಭೀಕರ ಬರ ಎದುರಾಗಿದೆ. ಯಾವತ್ತು ಈ ರೀತಿಯ ಬರ ಬಂದಿಲ್ಲ.‌ ಈ ರೀತಿಯ ಬರ 150 ವರ್ಷದ ಹಿಂದೆ ಬಂದಿತ್ತು ಎಂದು ಹೇಳಲಾಗುತ್ತದೆ. ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದೆ. ಜಿಲ್ಲೆಯಲ್ಲಿ ಯಾವ ಬೆಳೆಯೂ ಇಲ್ಲ. ಸೂರ್ಯಕಾಂತಿ, ಜೋಳ, ಹೂವು, ನಂಜನಗೂಡು ರಸಬಾಳೆ ಒಣಗಿದೆ. ಹಳ್ಳಿಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಇದನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ.‌ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಎಲ್ಲಿಂದ‌ ತರಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ.‌ ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ರೂ.‌ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 329 ಕೋಟಿ ರೂ.‌ನೀಡಲಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದೇನೆ. ಜನ-ಜಾನುವಾರುಗಳಿಗೆ ನೀರು, ಮೇವು ಹಾಗೂ ಉದ್ಯೋಗ ನೀಡುವುದು ಮುಖ್ಯವಾಗಿದೆ. ಶಾಸಕರೊಂದಿಗೆ ಚರ್ಚಿಸಿ ವಿಬಿ ಜಿ ರಾಮ್‌ಜಿ ಯೋಜನೆಯಡಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಸಹ ಹೇಳಿದ್ದೇನೆ. ರಾಜ್ಯದ ಯಜನತೆಗೆ ಒಳ್ಳೆಯ ಆಡಳಿತ ನೀಡಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಆಶಯ. ಅದಕ್ಕೆ ನಮ್ಮ ಇಡೀ ಮಂತ್ರಿ ಮಂಡಲ ಮತ್ತು ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular