ನಿನ್ನೆ ( ಮಾರ್ಚ್ 1 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗದ ಉತ್ತಮ ಆಟದಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಭಾರತಕ್ಕೆ 196 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು.
ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 97 ರನ್ ಬಾರಿಸಿ ಗೆಲುವಿನ ರೂವಾರಿಯಾಗಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದುಕೊಂಡರು. ಹೀಗೆ ಸಂಜು ಸ್ಯಾಮ್ಸನ್ ಅಬ್ಬರದ ಆಟ ಆಡಿ ತಂಡವನ್ನು ಸೆಮಿಫೈನಲ್‌ಗೆ ತಲುಪಿಸುವಲ್ಲಿ ಮುಖ್ಯ ಕಾರಣರಾಗುತ್ತಿದ್ದಂತೆ ಕ್ರಿಕೆಟ್ ಜಗತ್ತು ಸಂಜುಗೆ ತಲೆಬಾಗಿದೆ.
ಅದರಲ್ಲೂ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯ ಮುಗಿಯುತ್ತಿದ್ದಂತೆ ಕಣಕ್ಕಾಗಮಿಸಿ ಸಂಜು ಸ್ಯಾಮ್ಸನ್‌ಗೆ ತಲೆಬಾಗಿ ಗೌರವ ಸಲ್ಲಿಸಿದ್ದಾರೆ. ಈಗ ಹೀಗೆ ಪಂದ್ಯ ಗೆಲ್ಲಿಸಿಕೊಟ್ಟ ಸೂರ್ಯಕುಮಾರ್ ಯಾದವ್ ಮುಂದೆ ತಲೆ ಬಾಗಿದ ಸೂರ್ಯ ಫೆಬ್ರವರಿ 21ರಂದು ನಡೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಇದೇ ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ಕೊಡುತ್ತೀರಾ ಎಂಬ ಪ್ರಶ್ನೆ ಎದುರಾದಾಗ ಸಂಜುಗಾಗಿ ಅಭಿಷೇಕ್ ಶರ್ಮಾ ಕೂರಿಸಬೇಕಾ ಅಥವಾ ತಿಲಕ್ ವರ್ಮಾನನ್ನು ಕೂರಿಸಬೇಕಾ ಎಂದು ನಕ್ಕಿದ್ದರು.
ಈ ವಿಷಯವನ್ನು ಸದ್ಯ ನೆಟ್ಟಿಗರು ಸಹ ಹಂಚಿಕೊಳ್ಳುತ್ತಿದ್ದು, ಅಂದಿನ ವಿಡಿಯೊವನ್ನು ಹರಿಬಿಟ್ಟು ಸೂರ್ಯಕುಮಾರ್ ಕಾಲೆಳೆಯುತ್ತಿದ್ದಾರೆ.

