ಮೈಸೂರು: ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಲ್ಲಿ ಸಾಲು ಸಾಲು ಅಕ್ರಮಗಳು ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಇದೀಗ ಆನೆ ಕಾವಾಡಿಗಳ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎನ್ನಲಾಗಿದ್ದು, ಅರ್ಹರನ್ನು ಕೈ ಬಿಟ್ಟು ಸ್ವಜನ ಪಕ್ಷಪಾತ ಮಾಡಿ ಅನರ್ಹರಿಗೆ ಹುದ್ದೆಗಳನ್ನ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರದಿಂದ ಇತ್ತೀಚೆಗೆ ಮೈಸೂರು ವೃತ್ತದ 26 ಹುದ್ದೆಗಳಿಗೆ ಕಾವಾಡಿಗಳ ನೇಮಕಾತಿಗೆ ನೇರ ಸಂದರ್ಶನ ನಡೆದಿತ್ತು. ಇದೇ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ಮೈಸೂರಿನಲ್ಲೇ ನಡೆದಿದ್ದ ನೇರ ಸಂದರ್ಶನದಲ್ಲಿ 26 ಕಾವಾಡಿಗರನ್ನ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಪ್ರಕಟಿಸಿತ್ತು. ಆದರೆ ಇಲ್ಲಿ ಆಯ್ಕೆಯಾಗಿರುವ 26 ಅಭ್ಯರ್ಥಿಗಳ ಪೂರ್ವಾಪರ ನೋಡಿದರೆ ಹಲವು ಅನುಮಾನಗಳು ಮೂಡಿವೆ. ಅರ್ಹ ಅಭ್ಯರ್ಥಿಗಳನ್ನ ಕಡೆಗಣಿಸಿ ಇಲ್ಲಿ ಅನರ್ಹರಿಗೆ ಹುದ್ದೆಗಳನ್ನ ನೀಡಿರುವ ಆರೋಪ ಕೇಳಿಬಂದಿದೆ.
ಆನೆಗಳ ಜೊತೆ ಒಡನಾಟವಿಲ್ಲದವರು, ವಯೋಮಿತಿ ಮೀರಿದವರು, ನಕಲಿ ದಾಖಲೆ ಸಲ್ಲಿಸಿದವರಿಗೆ ಹುದ್ದೆ ನೀಡಿ, ಹಲವು ವರ್ಷಗಳ ಅನುಭವವಿರುವ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ.
ಆನೆಗಳ ಜೊತೆ ಒಡನಾಟ ಇರುವುದು ಕಡ್ಡಾಯ ಎಂಬುದು ಆನೆ ಕಾವಾಡಿ ಹುದ್ದೆಗೆ ಇರುವ ಮೊದಲ ಮಾನದಂಡ. ಆದರೆ ಇಲ್ಲಿ ಆಯ್ಕೆಯಾಗಿರುವ ಬಹಳಷ್ಟು ಅಭ್ಯರ್ಥಿಗಳಿಗೆ ಹಾಗೂ ಆನೆಗಳಿಗೂ ಯಾವುದೇ ಸಂಬಂಧವೇ ಇಲ್ಲ. ಅಂತವರನ್ನು ಆಯ್ಕೆ ಮಾಡಲಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕಾವಾಡಿ ಹುದ್ದೆಗೆ ಆಯ್ಕೆಯಾಗಲು ಅಭ್ಯರ್ಥಿಗಳು ಅರಣ್ಯದಂಚಿನಲ್ಲಿ ವಾಸ ಇರುವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಅಭ್ಯರ್ಥಿಗಳು ಅರಣ್ಯದಂಚಿನಲ್ಲೇ ವಾಸ ಇದ್ದಾರೆ ಎಂಬುದಕ್ಕೆ ಸ್ಥಳೀಯ ಗ್ರಾಮ ಲೆಕ್ಕಿಗ ಮತ್ತು ರೆವಿನ್ಯು ಇನ್ಸ್ಪೆಕ್ಟರ್ ಪರಿಶೀಲನೆ ಮಾಡಿ ತಹಶೀಲ್ದಾರ್ಗೆ ವರದಿ ನೀಡಬೇಕು. ಇದನ್ನ ಆಧರಿಸಿ ತಹಶೀಲ್ದಾರ್, ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ ಆಯ್ಕೆಯಾಗಿರುವ ಬಹಳಷ್ಟು ಅಭ್ಯರ್ಥಿಗಳು ಪಟ್ಟಣ ಪ್ರದೇಶದಲ್ಲಿ ವಾಸವಿರುವ ಬಗ್ಗೆ ಅಧಿಕೃತ ದಾಖಲೆಗಳಿವೆ.
ಕಾವಾಡಿಗಳ ನೇಮಕಾತಿಗೆ ಏಳು ವಿಭಾಗಗಳಲ್ಲಿ ಅರ್ಜಿ ಕರೆಯಲಾಗಿದ್ದು, ವಿವಿಧ ವಯೋಮಾನ ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಆಯ್ಕೆಯಾಗಿರುವ ಕೆಲ ಅಭ್ಯರ್ಥಿಗಳ ವಯಸ್ಸು 36, 38 ಮತ್ತು 40 ವರ್ಷ ಇರುವುದು ಹಲವು ಅನುಮಾನಗಳನ್ನ ಸೃಷ್ಟಿಸಿದೆ.
ಇಷ್ಟೇ ಅಲ್ಲ ಆಯ್ಕೆಯಲ್ಲಿ ಅನರ್ಹಗೊಂಡ ಅಭ್ಯರ್ಥಿಗಳ ಅರ್ಹತೆಗಳು ಅಚ್ಚರಿ ತರುವಂತಿದೆ. ಉದಾಹರಣೆಗೆ ಅಂಬಾರಿ ಹೊರುವ ಅಭಿಮನ್ಯು ಆನೆಯ ಮಾವುತ ವಸಂತನ ಪುತ್ರ ಆಕಾಶ್, ಕಾವಡಿಯಾಗಿ ಹುದ್ದೆಗಿಟ್ಟಿಸುವಲ್ಲಿ ವಿಫಲವಾಗಿದ್ದಾನೆ. ಅದೇ ರೀತಿ ದುಬಾರೆ ಆನೆ ಶಿಬಿರದಲ್ಲೇ ಹುಟ್ಟಿ ಬೆಳೆದು ಆನೆಗಳ ಜೊತೆ ಒಡನಾಟವಿರುವ ಬಹಳಷ್ಟು ಅಭ್ಯರ್ಥಿಗಳು ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ.
ಅರ್ಹರನ್ನ ಕೈಬಿಟ್ಟು, ಕೆಲ ಅರಣ್ಯಾಧಿಕಾರಿಗಳ ಚಾಲಕರ ಮಕ್ಕಳು, ಪಶುವೈದ್ಯರ ಚಾಲಕರ ಮಕ್ಕಳು, ಅರಣ್ಯ ಭವನದಲ್ಲಿ ಕೆಲಸ ಮಾಡುವ ತಮ್ಮ ಆಪ್ತರಿಗೆ ಹುದ್ದೆ ನೀಡಿರುವ ಆರೋಪ ಕೇಳಿಬಂದಿದೆ. ಇಂತಹ ಅರ್ಹ ಅಭ್ಯರ್ಥಿಗಳನ್ನ ಅನರ್ಹ ಮಾಡಿರುವ ಅಧಿಕಾರಿಗಳ ನಡೆ ಹಲವು ಅನುಮಾಗಳಿಗೆ ಕಾರಣವಾಗಿದೆ. ಈ ಬಗ್ಗೆ ಹಲವು ಮಾವುತರು ಮತ್ತು ಕಾವಾಡಿಗಳು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಎಸ್ ಪೊನ್ನಣ್ಣ ಅವರಿಗೆ ದೂರು ನೀಡಿದ್ದಾರೆ.
ಸದ್ಯ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ನೇಮಕಾತಿ ಪಟ್ಟಿಯನ್ನ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲು ಕೆಲವು ಸಂಘಟನೆಗಳು ಮುಂದಾಗಿವೆ ಎಂದು ತಿಳಿದುಬಂದಿದೆ.

