ನಿನ್ನೆ ( ಏಪ್ರಿಲ್ 9 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಲಾಸ್ಟ್ ಬಾಲ್ ಥ್ರಿಲ್ಲರ್ ಪಂದ್ಯಕ್ಕೆ ಸಾಕ್ಷಿಯಾಯಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು
ರನ್ ಚೇಸ್ ಮಾಡಲು ಮುಂದಾದ ಲಕ್ನೋ ಸೂಪರ್ ಜೈಂಟ್ಸ್ 15 ಓವರ್‌ಗಳಲ್ಲಿ ತನ್ನ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮುಕುಲ್ ತಂಡದ ಪರ ಇದ್ದ ಕೊನೆಯ ಬ್ಯಾಟ್ಸ್‌ಮನ್ ಆಗಿದ್ದರು. ಕೊನೆಯ 30 ಎಸೆತಕ್ಕೆ 55 ರನ್ ಬೇಕಿತ್ತು. ಬೌಲರ್‌ಗಳ ಜತೆ ಸೇರಿ ಸ್ಟ್ರೈಕ್ ಕಾಯ್ದುಕೊಳ್ಳುತ್ತಾ ಸಂಪೂರ್ಣ ಜವಾಬ್ದಾರಿ ಹೊತ್ತ ಮುಕುಲ್ ಕೊನೆಯ 12 ಎಸೆತಗಳಲ್ಲಿ ಗೆಲ್ಲಲು 30 ರನ್ ಬೇಕಿದ್ದಾಗ ಕ್ಯಾಮೆರಾನ್ ಗ್ರೀನ್ ಎಸೆದ 19ನೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ಮುಕುಲ್ 6 ಎಸೆತಕ್ಕೆ 14 ರನ್ ಬಾರಿಸಬೇಕಾದ ಹಂತಕ್ಕೆ ಪಂದ್ಯವನ್ನು ತಂದರು. ವೈಭವ್ ಅರೋರಾ ಎಸೆದ ಕೊನೆಯ ಓವರ್‌ನ ಮೊದಲ ಎಸೆತಕ್ಕೆ ಆವೇಶ್ ಖಾನ್ ಸಿಂಗಲ್ ತೆಗೆದುಕೊಂಡರೆ, ಎರಡನೇ ಎಸೆತಕ್ಕೆ ಮುಕುಲ್ ಸಿಕ್ಸರ್ ಬಾರಿಸಿದರು. ಅಲ್ಲಿಗೆ ಕೊನೆಯ 4 ಎಸೆತಗಳಲ್ಲಿ 7 ರನ್ ಬೇಕಿತ್ತು. ಮೂರನೇ ಮತ್ತು ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬಾರದ ಕಾರಣ ಲಕ್ನೋ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 7 ರನ್ ಬಾರಿಸಬೇಕಿತ್ತು. ಐದನೇ ಎಸೆತವನ್ನು ಮುಕುಲ್ ಸಿಕ್ಸರ್‌ಗೆ ಅಟ್ಟಿದರು ಹಾಗೂ ಅಲ್ಲಿಗೆ ಪಂದ್ಯ ಡ್ರಾ ಮಟ್ಟ ತಲುಪಿತು. ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ ಚೆಂಡು ಬೀಟ್ ಆಗಿ ವಿಕೆಟ್ ಕೀಪರ್ ಕೈ ತಲುಪಿತು. ಈ ವೇಳೆ ಒಂದು ರನ್ ಓಡಿ ಲಕ್ನೋ ಗೆಲುವು ಕಂಡಿತು.
ಹೀಗೆ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ಮೂಲಕ ಅಜೇಯ 54ರನ್ ಕಲೆಹಾಕಿದ ಮುಕುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂದಹಾಗೆ ಈ ಮಟ್ಟಕ್ಕೆ ಅಬ್ಬರಿಸಿದ ಮುಕುಲ್ ಕ್ರಿಕೆಟ್ ಅಭ್ಯಾಸ ಆರಂಭಿಸುವ ಸಮಯದಲ್ಲಿ ಬ್ಯಾಟ್ಸ್‌ಮನ್ ಆಗಿರಲಿಲ್ಲ. ಅಸಲಿಗೆ ಅವರು ಅಭ್ಯಾಸ ಆರಂಭಿಸಿದ್ದು ವೇಗದ ಬೌಲರ್ ಆಗಿ. ಕಾಲ ಕಳೆದಂತೆ ಅವರು ಬೌಲರ್‌ನಿಂದ ವಿಕೆಟ್ ಕೀಪರ್ ಆಗಲು ಒಲವು ಬೆಳೆಸಿಕೊಂಡು ಬ್ಯಾಟ್ ಹಿಡಿದು ದೊಡ್ಡ ಹೊಡೆತ ಬಾರಿಸುವ ಕಡೆಗೆ ಗಮನವಿಟ್ಟರು.
ಮುಕುಲ್ ರಾಜಸ್ಥಾನದ ಜುನ್‌ಜುನ್ ಎಂಬ ಪ್ರದೇಶದಿಂದ ಬಂದ ಮಧ್ಯಮ ವರ್ಗದ ಕುಟುಂಬದ ಪ್ರತಿಭೆ. ಕುಟುಂಬದ ಆರ್ಥಿಕ ಸಮಸ್ಯೆಯಿಂದ ತಡವಾಗಿ 13ನೇ ವಯಸ್ಸಿನಿಂದ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಈತ ಬಳಿಕ ಹೆಚ್ಚುವರಿ ಅಭ್ಯಾಸಕ್ಕಾಗಿ ನಗರ ಪ್ರದೇಶ ತಲುಪಿದ. ಟಿ ಟ್ವೆಂಟಿ ಕ್ರಿಕೆಟ್‌ನ ಮಹತ್ವ ಅರಿತ ಈತ ಹೆಚ್ಚಾಗಿ ಚುಟುಕು ಕ್ರಿಕೆಟ್‌ನತ್ತ ಗಮನ ಹರಿಸಿ ಅಭ್ಯಾಸ ನಡೆಸಲಾರಂಭಿಸಿದರು.
ಕಳೆದ ವರ್ಷ ನಡೆದ ರಾಜಸ್ಥಾನ ಪುರುಷರ ಅಂಡರ್ 23 ಟ್ರೋಫಿಯಲ್ಲಿ ಸತತ ಶತಕಗಳ ಜತೆಗೆ 143 ಸ್ಟ್ರೈಕ್‌ರೇಟ್‌ನೊಂದಿಗೆ 617 ರನ್ ಚಚ್ಚಿದ ಮುಕುಲ್ ಚೌಧರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜಸ್ಥಾನ ತಂಡದ ಪರ ಕಣಕ್ಕಿಳಿಯುವ ಅವಕಾಶ ಒದಗಿಬಂದಿತ್ತು. ಆ ಬಳಿಕ ಐಪಿಎಲ್‌ನಲ್ಲಿ ಈತನಿಗಾಗಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಜಿದ್ದಾಜಿದ್ದಿ ನಡೆಸಿ ಕೊನೆಗೆ 2.60 ಕೋಟಿಗೆ ಲಕ್ನೋ ಪಾಲಾದರು.

