ನಿನ್ನೆ ( ಏಪ್ರಿಲ್ 11 ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 23 ರನ್ಗಳ ಗೆಲುವನ್ನು ಸಾಧಿಸಿ ಟೂರ್ನಿಯಲ್ಲಿ ಜಯದ ಖಾತೆಯನ್ನು ತೆರೆಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆರಿಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಚೆನ್ನೂ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕ ಹಾಗೂ ಆಯುಷ್ ಮ್ಹಾತ್ರೆ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 213 ರನ್ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 189 ರನ್ಗಳಿಗೆ ಆಲ್ಔಟ್ ಆಯಿತು.
ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭದಲ್ಲಿ ಪಥುಮ್ ನಿಸ್ಸಂಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ ಬಿಟ್ಟರೆ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ಟ್ರಿಸ್ಟಬ್ ಸ್ಟಬ್ಸ್ ಡೆಲ್ಲಿ ಪಾಲಿಗೆ ಉಳಿದಿದ್ದ ಕೊನೆಯ ಗೆಲುವಿನ ನಂಬಿಕೆಯಾಗಿದ್ದರು. ಆದರೆ ಸ್ಟಬ್ಸ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 60 ರನ್ ಬಾರಿಸಿ ಕ್ಯಾಚ್ ನೀಡಿ ಔಟ್ ಆದರು. ಅಲ್ಲಿಗೆ ಡೆಲ್ಲಿ ಗೆಲುವಿನ ಆಸೆ ಕಮರಿತು.
ಹೀಗೆ ಸ್ಟಬ್ಸ್ ಔಟ್ ಆದ ಬೆನ್ನಲ್ಲೇ ಡೆಲ್ಲಿಯ ಮತ್ತೋರ್ವ ಆಟಗಾರ ನಿತಿಶ್ ರಾಣಾ ಅಂಪೈರ್ ಬಳಿ ಧಾವಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಹೌದು, ಟ್ರಿಸ್ಟಬ್ ಸ್ಟಬ್ಸ್ 19ನೇ ಓವರ್ನ ಮಧ್ಯದಲ್ಲಿ ಗ್ಲೌಸ್ ಬದಲಿಸಲು ಮನವಿ ಇಟ್ಟಿದ್ದಾರೆ. ಚೆನ್ನೈನ ಶೆಕೆಗೆ ಗ್ಲೌಸ್ ತೀವ್ರ ಬೆವರಾಗಿದ್ದ ಕಾರಣ ಬದಲಿಸಲು ಮನವಿ ಮಾಡಿದ್ದಾರೆ. ನಿಯಮದ ಪ್ರಕಾರ ಓವರ್ ಮುಗಿದ ಬಳಿಕ, ಟೈಮ್ಔಟ್ ಟೈಮ್ನಲ್ಲಿ ಮಾತ್ರ ಗ್ಲೌಸ್ ಬದಲಿಸಲು ಅವಕಾಶವಿದೆ. ಒಂದುವೇಳೆ ಗ್ಲೌಸ್ ಹರಿದುಹೋದರೆ ಮಾತ್ರ ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸಲು ಅವಕಾಶವಿದೆ. ಇಲ್ಲಿ ಕೇವಲ ಬೆವರಿನ ಕಾರಣಕ್ಕೆ ಗ್ಲೌಸ್ ಬದಲಿಸಲು ಕೇಳಿದ್ದರಿಂದ ಅಂಪೈರ್ ನಿರಾಕರಿಸಿದರು.
ಈ ನಿರಾಕರಣೆಯ ಬಳಿಕ ಎದುರಾದ ಎಸೆತದಲ್ಲೇ ಸ್ಟಬ್ಸ್ ಕ್ಯಾಚ್ ಔಟ್ ಆದರು. ಇದರಿಂದ ಕೋಪಗೊಂಡ ನಿತಿಶ್ ರಾಣಾ ಗ್ಲೌಸ್ ಬದಲಿಸಲು ಏಕೆ ಅವಕಾಶ ನೀಡಲಿಲ್ಲ ಎಂದು ಅಂಪೈರ್ ಜತೆ ಜಗಳಕ್ಕಿಳಿದರು. ಮಾಹಿತಿಯ ಪ್ರಕಾರ ನಿತಿಶ್ ಚೆನ್ನೈ ತಂಡದ ಆಟಗಾರರಿಗೆ ಓವರ್ ಮಧ್ಯ ಗ್ಲೌಸ್ ಬದಲಿಸುವ ಅವಕಾಶ ನೀಡಿ ನಮಗೆ ನೀಡಲಿಲ್ಲ ಎಂದು ವಾದಿಸುತ್ತಿದ್ದರು ಎನ್ನಲಾಗಿದೆ.

