ಬೆಂಗಳೂರು: ಕಾನೂನು ಬದ್ಧವಾಗಿ ಬಂಧಿಸದೆ ರಕ್ತದ ಮಾದರಿ ಸಂಗ್ರಹಿಸಲು ಅವಕಾಶವಿಲ್ಲ. ಹೀಗಾಗಿ ಬಂಧನಕ್ಕೆ ಮೊದಲು ಸಂಗ್ರಹಿಸಿದ ರಕ್ತದ ಮಾದರಿಯನ್ನು ಸಾಕ್ಷಿಯಾಗಿ ಪರಿಗಣಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
2025ರ ಮೇ ತಿಂಗಳಲ್ಲಿ ಫಾರ್ಮ್ ಹೌಸ್ ವೊಂದರಲ್ಲಿ ನಡೆದಿದ್ದ ಬರ್ತಡೇ ಪಾರ್ಟಿ ಮೇಲಿನ ದಾಳಿ ಪ್ರಕರಣ ಸಂಬಂಧ ಮಹಿಳೆಯೊಬ್ಬರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸಿದೆ. ತನ್ನ ವಿರುದ್ಧ ದಾಖಲದ ಪ್ರಕರಣ ರದ್ದು ಮಾಡುವಂತೆ ಕೋರಿ ಮಹಿಳೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ರಕ್ತಪರೀಕ್ಷೆ ನಡೆಸಲು ಮೊದಲು ಕಾನೂನು ಬದ್ಧವಾಗಿ ಬಂದನ ಆಗಿರಬೇಕು. ಬಂಧನ ಇಲ್ಲದೆ ರಕ್ತದ ಮಾದರಿ ಸಂಗ್ರಹಿಸುವುದು ಕಾನೂನು ಬಾಹಿರವಾಗಿದೆ. ಕಾನೂನುಬದ್ಧ ಬಂಧನಕ್ಕೆ ಅಗತ್ಯ ಕ್ರಮಗಳು, ವಿಶೇಷವಾಗಿ ಬಂಧನದ ಕಾರಣಗಳನ್ನು ತಿಳಿಸುವುದು ಕಡ್ಡಾಯ. ಹೀಗಾಗಿ ಅರ್ಜಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಅದರ ಆಧಾರದಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆ ರದ್ದಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದಲ್ಲಿ ರಕ್ತ ಮಾದರಿ ಆಧಾರವನ್ನು ಮಾದಕ ವಸ್ತು ಸೇವನೆ ಎಂದು ಆರೋಪಿಸಲಾಗಿದೆ. ರಕ್ತದ ಮಾದರಿಯನ್ನೇ ಕಾನೂನು ಬಾಹಿರವಾಗಿ ಸಂಗ್ರಹಿಸಲಾಗಿದೆ. ಆದ ಕಾರಣ ಸಾಕ್ಷಗಳ ಆಧಾರದಲ್ಲಿ ಪ್ರಾಸಿಕ್ಯೂಷನ್ ಮುಂದುವರಿಸಲು ಸಾಧ್ಯವಿಲ್ಲ. ತನಿಖಾಧಿಕಾರಿಗಳು ಅರ್ಜಿದಾರರ ವಿರುದ್ಧ ಸಂಜ್ಞೆಯ ಅಪರಾಧಕ್ಕೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಮಾಹಿತಿ ಒದಗಿಸಿಲ್ಲ. ಅರ್ಜಿದಾರರ ರಕ್ತದ ಮಾದರಿ ಸಂಗ್ರಹಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಬೆಂಗಳೂರಿನ ಕೆಆರ್ ಪುರ ನಿವಾಸಿ ಅರ್ಜಿದಾರ ಮಹಿಳೆ ದೇವನಹಳ್ಳಿಯ ಕನ್ನಮಂಗಲ ರಸ್ತೆಯ ಫಾರ್ಮ್ ಹೌಸ್ ನಲ್ಲಿ ಅನುಮತಿ ಇಲ್ಲದೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ದೇವನಹಳ್ಳಿ ಪೊಲೀಸರು ಅರ್ಜಿದಾರರು ಸೇರಿ 12 ಮಂದಿ ವಿರುದ್ಧ ಮಾದಕ ವಸ್ತು ಸೇವನೆ ಆರೋಪದಡಿ ಪ್ರಕರಣ ದಾಖಲಿಸಿ ಅವರೆಲ್ಲರನ್ನು ವಶಕ್ಕೆ ಪಡೆದು ರಕ್ತದ ಮಾದರಿ ಸಂಗ್ರಹಿಸಿ ಬಿಡುಗಡೆ ಮಾಡಿದ್ದರು. 12ನೇ ಆರೋಪಿಯಾಗಿರುವ ಅರ್ಜಿದಾರ ಮಹಿಳೆ ತಮ್ಮ ವಿರುದ್ಧದ ಆರೋಪ ಕೈಬಿಡಲು ಹೈಕೋರ್ಟ್ ಗೆ ಮನವಿ ಮಾಡಿದ್ದರು.

