ನಿನ್ನೆ ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 30 ರನ್ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇಆಫ್ಗೆ ಪ್ರವೇಶ ಪಡೆದುಕೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಮೊನ್ನೆ ಲಕ್ನೋ ತಂಡವನ್ನು ಸೋಲಿಸಿ ಆರು ಸೋಲುಗಳ ಬಳಿಕ ಗೆದ್ದು 15 ಅಂಕಗಳನ್ನು ತಲುಪಿದ ಪಂಜಾಬ್ ಕಿಂಗ್ಸ್ ನಿನ್ನೆಯ ಪಂದ್ಯದಲ್ಲಿ ಮುಂಬೈ 14 ಅಂಕ ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದರೆ ಸಾಕು ತಾವು ಪ್ಲೇಆಫ್ ಪ್ರವೇಶಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದರು.
ಆದರೆ ಈ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ರಾಜಸ್ಥಾನ್ ರಾಯಲ್ಸ್ ಗೆದ್ದು 16 ಅಂಕ ಪಡೆದು ಪ್ಲೇಆಫ್ ತಲುಪಿದೆ. ಅಲ್ಲಿಗೆ ಕೇವಲ ಒಂದು ಅಂಕದ ಅಂತರದಲ್ಲಿ ಪಂಜಾಬ್ ಕಿಂಗ್ಸ್ ಪ್ಲೇಆಫ್ ಪ್ರವೇಶವನ್ನು ಕೈತಪ್ಪಿಸಿಕೊಂಡಿದೆ.
ಟೂರ್ನಿಯ ಆರಂಭದಲ್ಲಿ ಸತತ ಆರು ಗೆಲುವುಗಳನ್ನು ಕಂಡು ಸೋಲಿಲ್ಲದ ಸರದಾರರಾಗಿ ಮೆರೆದಿದ್ದ ಪಂಜಾಬ್ ಮೂರನೇ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಿದಾಗ ಮಳೆಯ ಆಗಮನವಾಗಿ ಪಂದ್ಯ ರದ್ದಾಗಿತ್ತು. ಈ ಪಂದ್ಯವನ್ನು ಪಂಜಾಬ್ ಗೆಲ್ಲುವ ಎಲ್ಲ ಲಕ್ಷಣವಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ಕೇವಲ 25 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಂದು ಮಳೆ ಬರದೇ ಇದ್ದಿದ್ದರೆ ಪಂಜಾಬ್ ಎರಡು ಅಂಕ ಪಡೆದು ಇಂದು 16 ಅಂಕಗಳೊಂದಿಗೆ ಪ್ಲೇಆಫ್ ತಲುಪಬಹುದಿತ್ತು.
ಹೀಗೆ ಅಂದು ಮಳೆಯಿಂದಾಗಿ ಪಂದ್ಯ ರದ್ದಾಗಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆಯಾದಾಗ ಶ್ರೇಯಸ್ ಐಯ್ಯರ್ ಸಹೋದರಿ ಶ್ರೇಷ್ಠ ಐಯ್ಯರ್ ತನ್ನ ಸ್ನೇಹಿತರ ಗುಂಪು ಕಟ್ಟಿಕೊಂಡು ಒಂದು ಅಂಕವನ್ನು ಮಜಾ ಮಾಡಿ ಎಂದು ಕೆಕೆಆರ್ಗೆ ಕೌಂಟರ್ ಕೊಟ್ಟು ಕೊಬ್ಬಿನಿಂದ ಕುಣಿದಿದ್ದರು. ಇಂದು ಅದೇ ಒಂದು ಅಂಕ ಪಂಜಾಬ್ ತಂಡವನ್ನು ಟೂರ್ನಿಯಿಂದ ಎಲಿಮಿನೇಟ್ ಮಾಡಿ ಬಿಸಾಕಿದೆ.

