ಇಂದು ( ಮೇ 27 ) ನ್ಯೂ ಚಂಡೀಗಢ್‌ನ ಮುಲ್ಲಾನ್‌ಪುರ್‌ನ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯ ನಡೆಯುತ್ತಿದ್ದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆರಿಸಿಕೊಂಡಿದ್ದು, ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಗುರಿಯನ್ನು ನೀಡಿದೆ.
ಸನ್ ರೈಸರ್ಸ್ ಹೈದರಾಬಾದ್ ಈ ಮೊತ್ತವನ್ನು ಚೇಸ್ ಮಾಡಿದರೆ ಮೇ 29ರಂದು ನಡೆಯಲಿರುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದ್ದು, ಚೇಸ್ ಮಾಡುವಲ್ಲಿ ವಿಫಲರಾದರೆ ಎಲಿಮಿನೇಟ್ ಆಗಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಕಣಕ್ಕಿಳಿದರು. ಈ ಜೋಡಿ 8 ಓವರ್‌ಗಳಲ್ಲಿ 125 ರನ್‌ಗಳ ಜತೆಯಾಟವನ್ನಾಡಿತು. ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 97 ರನ್ ಬಾರಿಸಿದರೆ, ಯಶಸ್ವಿ ಜೈಸ್ವಾಲ್ 29 ರನ್ ಬಾರಿಸಿದರು. ವೈಭವ್ ವಿಕೆಟ್ ಬಿದ್ದ ಬಳಿಕ ಕಣಕ್ಕಿಳಿದು ಅಬ್ಬರಿಸಿದ ಧ್ರುವ್ ಜುರೆಲ್ 21 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 50 ರನ್ ಬಾರಿಸಿ ತಂಡದ ರನ್ ವೇಗವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ರಿಯಾನ್ ಪರಾಗ್ 12 ಎಸೆತಗಳಲ್ಲಿ 26 ರನ್ ಬಾರಿಸಿದರೆ, ಡೊನೊವನ್ ಫೆರೆರಾ 12, ದಸುನ್ ಶನಕ 5, ಜೋಫ್ರಾ ಆರ್ಚರ್ 4, ನಾಂದ್ರೆ ಬರ್ಗರ್ 1, ಸುಶಾಂತ್ ಮಿಶ್ರಾ ಅಜೇಯ 1 ರನ್ ಹಾಗೂ ರವೀಂದ್ರ ಜಡೇಜಾ ಅಜೇಯ 12 ರನ್ ಗಳಿಸಿದರು.
ಸನ್ ರೈಸರ್ಸ್ ಹೈದರಾಬಾದ್ ಪರ ಪ್ರಫುಲ್ ಹಿಂಗೆ ಮೂರು ವಿಕೆಟ್, ಈಶಾನ್ ಮಲಿಂಗ, ಶಿವಾಂಗ್ ಕುಮಾರ್ ಹಾಗೂ ನಿತಿಶ್ ಕುಮಾರ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.

