ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ರಾಜ್ಯ ಸರ್ಕಾರಕ್ಕೆ ಬುಧವಾರ ಸಲ್ಲಿಸಿದ ಜಾತಿಗಣತಿಯ ಅಂತಿಮ ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು 32 ರಿಂದ 42ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ.
ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು 80.14 ಲಕ್ಷ ಜನ ಸಂಖ್ಯೆ ಹೊಂದಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 14 ರಷ್ಟು ಮುಸ್ಲಿಂ ಸಮುದಾಯದವರಿದ್ದಾರೆ. ಶೇಕಡ 11ರಷ್ಟು ಇರುವ ವೀರಶೈವ ಲಿಂಗಾಯಿತರ ಜನಸಂಖ್ಯೆ 65 ಲಕ್ಷದಷ್ಟು ಇದೆ. ಶೇಕಡ 10ರಷ್ಟು ಇರುವ ಒಕ್ಕಲಿಗರ ಜನಸಂಖ್ಯೆ 60 ಲಕ್ಷ, 8% ರಷ್ಟು ಇರುವ ಕುರುಬ ಸಮುದಾಯದ ಜನಸಂಖ್ಯೆ 45 ಲಕ್ಷ ಇದೆ ಎಂದು ಹೇಳಲಾಗಿದೆ.
ರಾಜ್ಯದ ಪ್ರತಿ ಜಾತಿ ಹೊಂದಿರುವ ಜನಸಂಖ್ಯೆ ಸಾಮಾಜಿಕ ಆರ್ಥಿಕ ರಾಜಕೀಯ ಸ್ಥಿತಿ ಸೇರಿದಂತೆ ಸಮಗ್ರ ಮಾಹಿತಿಯನ್ನು 13 ಅಧ್ಯಾಯ ಒಳಗೊಂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರವರ್ಗ-1ರಲ್ಲಿನ ಜಾತಿಗಳನ್ನು ಎರಡು ಪ್ರವರ್ಗ, ಪ್ರವರ್ಗ-2 ಹಾಗೂ ಪ್ರವರ್ಗ-3ಯಲ್ಲಿನ ಜಾತಿಗಳನ್ನು ತಲಾ ಮೂರು ಪ್ರವರ್ಗಗಳಾಗಿ ವಿಂಗಡಿಸಿದೆ. ಸರ್ಕಾರವು ಹಾಲಿ ಮೀಸಲಾತಿ ಪ್ರಮಾಣವನ್ನು ಶೇ 32ಕ್ಕೆ ಸೀಮಿತಗೊಳಿಸುವುದಾದರೆ ಪ್ರವರ್ಗ-1ರ ಎರಡು ಪ್ರವರ್ಗಗಳಿಗೆ ತಲಾ ಶೇ 3, ಪ್ರವರ್ಗ-2ಎಗೆ ಶೇ 8, 2ಬಿಗೆ ಶೇ 4 ಹಾಗೂ 2 ಸಿ ಗೆ ಶೇ 5ರಷ್ಟು ಮೀಸಲಾತಿ, ಪ್ರವರ್ಗ-3ಎಗೆ ಶೇ 3, 3 ಬಿಗೆ ಶೇ 4 ಹಾಗೂ 3ಸಿ ಗೆ ಶೇ 2 ಮೀಸಲಾತಿ ನೀಡಲು ಶಿಫಾರಸು ಮಾಡಿದೆ.
ಆಯೋಗವು ಸರ್ಕಾರದ ಸೂಚನೆಯಂತೆ 2025ನೇ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31ರವರೆಗೆ ರಾಜ್ಯದಾದ್ಯಂತ ಸಮೀಕ್ಷೆ ನಡೆಸಿ, ಅಧ್ಯಯನ ವರದಿ ಸಿದ್ದಪಡಿಸಿತ್ತು. ಆನ್‌ಲೈನ್ ಮೂಲಕ ಸ್ವಯಂ ಘೋಷಣೆಯ ಮಾಹಿತಿಯನ್ನು ಸಲ್ಲಿಸಲ ನವೆಂಬರ್ 30ರವರೆಗೆ ಅವಕಾಶ ಕಲ್ಪಿಸಲಾಗಿತ್ತು. 6.14 ಕೋಟಿ ಜನರಲ್ಲಿ 5.86 ಕೋಟಿ ಜನರು ಭಾಗವಹಿಸಿ, ಮಾಹಿತಿ ನೀಡಿದ್ದರು. ಸಮೀಕ್ಷೆಗೆ ಒಟ್ಟು 253 ಕೋಟಿ ರೂ. ವೆಚ್ಚವಾಗಿದೆ. ಸಮೀಕ್ಷೆಯಿಂದ ಸಂಗ್ರಹಿಸಲಾದ ಮಾಹಿತಿಯನ್ನು ವಿಶ್ಲೇಷಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ.
ರಾಷ್ಟ್ರೀಯ, ರಾಜ್ಯಗಳ ವಿವಿಧ ಆಯೋಗಗಳು ನಡೆಸಿದ ಅಧ್ಯಯನಗಳು, ಹಿಂದುಳಿದಿರುವಿಕೆ ಐತಿಹಾಸ, ಸಮೀಕ್ಷೆಗೆ ಅನುಸರಿಸಿದ ವಿಧಾನ ಮತ್ತು ದೃಷ್ಟಿಕೋನ, ಹಿಂದುಳಿದಿರುವಿಕೆ ನಿರ್ಧರಿಸುವ ಮಾನದಂಡಗಳು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಹಿಂದುಳಿದಿರುವಿಕೆಯ ವಿಶ್ಲೇಷಣೆ ಹಾಗೂ ಆಯೋಗದ ಶಿಫಾರಸುಗಳನ್ನು ವರದಿ ಒಳಗೊಂಡಿದೆ ಎನ್ನಲಾಗಿದೆ.

