ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ( ಏಪ್ರಿಲ್ 29 ) ಐಪಿಎಲ್ 2026ರ ಲೀಗ್ ಹಂತದ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ ಹೈದರಾಬಾದ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರಯಾನ್ ರಿಕೆಲ್ಟನ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿ ಬೌಂಡರಿಗಳ ಸುರಿಮಳೆಗೈದ ಸನ್ ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಚಚ್ಚಿತು.
ಮುಂಬೈ ಇಂಡಿಯನ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಅಬ್ಬರದ ಜತೆಯಾಟವನ್ನಾಡಿದರು. ಹೆನ್‌ರಿಚ್ ಕ್ಲಾಸೆನ್ ಹಾಗೂ ಸಲೀಲ್ ಅರೋರ ಸಹ ಅಬ್ಬರಿಸಿ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದಿಟ್ಟರು.
ಆರಂಭಿಕ ಜೋಡಿ 8.4 ಓವರ್‌ಗಳಲ್ಲಿ 129 ರನ್‌ಗಳ ಜತೆಯಾಟವನ್ನಾಡಿ ಅತ್ಯುತ್ತಮ ಆರಂಭ ಕಟ್ಟಿಕೊಟ್ಟರು. ಮೂರು ಕ್ಯಾಚ್ ಡ್ರಾಪ್‌ನಿಂದ ಜೀವದಾನ ಪಡೆದುಕೊಂಡ ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 76 ಚಚ್ಚಿ ಅಬ್ಬರಿಸಿ ಆರಂಭದಿಂದಲೇ ಮುಂಬೈ ಕೈನಿಂದ ಪಂದ್ಯವನ್ನು ಕಸಿದುಕೊಳ್ಳಲು ಆರಂಭಿಸಿದರು.
ಹೀಗೆ ಅಬ್ಬರಿಸಿದ ಹೆಡ್ ಕೇವಲ 8 ರನ್ ಗಳಿಸಿದ್ದಾಗಲೇ ಔಟ್ ಆಗಿದ್ದರು. ಹೌದು, ಟ್ರೆಂಟ್ ಬೌಲ್ಡ್ ಎಸೆದ ಮೂರನೇ ಓವರ್‌ನ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ಹೆಡ್ ನಂತರದ ಎಸೆತದಲ್ಲೇ ವಿಕೆಟ್ ಕೀಪರ್ ಕ್ಯಾಚ್ ಆಗಿದ್ದರು. ಆದರೆ ವಿಕೆಟ್ ಕೀಪರ್ ಆಗಲಿ, ಬೌಲರ್ ಆಗಲಿ ಹಾಗೂ ಮುಂಬೈನ ಯಾವ ಆಟಗಾರನೂ ಸಹ ಅಪೀಲ್ ಮಾಡದ ಕಾರಣ ಹೆಡ್ ಆಟ ಮುಂದುವರಿಸಿದರು. ಆ ಸಮಯದಲ್ಲಿ ಹೆಡ್ 6 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದರು. ಆ ಸಮದಯಲ್ಲೇನಾದರೂ ಹೆಡ್ ವಿಕೆಟ್ ಪಡೆದುಕೊಂಡಿದ್ದರೆ ಪವರ್‌ಪ್ಲೇನಲ್ಲೇ ಸನ್‌ರೈಸರ್ಸ್ ತಂಡವನ್ನು ಒತ್ತಡಕ್ಕೆ ತಳ್ಳಬಹುದಿತ್ತು.

