HomeKarnatakaಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ ಅದೇ ಹುದ್ದೆಯಲ್ಲಿ ಮುಂದುವರೆದವರಿಗೆ ಹೆಚ್ಚುವರಿ...

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ ಅದೇ ಹುದ್ದೆಯಲ್ಲಿ ಮುಂದುವರೆದವರಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರು

ಬೆಂಗಳೂರು: ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ 25 ಮತ್ತು 30 ವರ್ಷಗಳು ಅದೇ ಹುದ್ದೆಯಲ್ಲಿ ಮುಂದುವರಿದಿರುವ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ ಆದೇಶಿಸಲಾಗಿದೆ.

ದಿನಾಂಕ 09-05-2002ರ ಸರ್ಕಾರಿ ಆದೇಶದನ್ವಯ, ಸದರಿ ಆದೇಶದ ಕಂಡಿಕೆ 6(ii) ರಲ್ಲಿ ನಮೂದಿಸಲಾಗಿರುವ ನೌಕರರನ್ನು ಹೊರತುಪಡಿಸಿ ರಾಜ್ಯ ವೇತನ ಶ್ರೇಣಿಗಳಲ್ಲಿನ ಮೊದಲ 11 ವೇತನ ಶ್ರೇಣಿಗಳಲ್ಲಿ ಯಾವುದೇ ಒಂದು ಹುದ್ದೆಯಲ್ಲಿ ಇಪ್ಪತ್ತು ವರ್ಷಗಳ ಕಾಲ ಒಂದೂ ಪದೋನ್ನತಿ ಪಡೆಯದೆ ಮುಂದುವರಿಯುವ ಸರ್ಕಾರಿ ನೌಕರನಿಗೆ ಆ ಹುದ್ದೆಗೆ ನಿಗಧಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಅವನು ಹೊಂದಿರುವ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ ಆಯಾ ಪ್ರಕರಣದನ್ವಯ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 1-4-2002 ರಿಂದ ಜಾರಿಗೆ ಬರುವಂತೆ ಅಥವಾ ಇಪ್ಪತ್ತು ವರ್ಷಗಳ ಸೇವೆ ಪೂರ್ಣಗೊಳಿಸುವ ದಿನಾಂಕದಿಂದ ಇದರಲ್ಲಿ ಯಾವುದು ನಂತರವೋ ಆ ದಿನಾಂಕದಿಂದ ಮಂಜೂರು ಮಾಡಲು ಅವಕಾಶವಿರುತ್ತದೆ. ಪ್ರಸ್ತುತ ಈ ಸೌಲಭ್ಯವು ರಾಜ್ಯ ವೇತನ ಶ್ರೇಣಿಯಲ್ಲಿನ ಮೊದಲ 15 ವೇತನ ಶ್ರೇಣಿಯಲ್ಲಿರುವ ಸರ್ಕಾರಿ ನೌಕರರಿಗೆ ಲಭ್ಯವಿರುತ್ತದೆ.

2011ರ ಅಧಿಕಾರಿ ವೇತನ ಸಮಿತಿಯು ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ ಇಪ್ಪತ್ತೈದು ವರ್ಷಗಳ ಕಾಲ ಅದೇ ಹುದ್ದೆಯಲ್ಲಿ ಮುಂದುವರಿಯುವ ಸರ್ಕಾರಿ ನೌಕರನಿಗೆ 2ನೇ ಹೆಚ್ಚುವರಿ ವೇತನ ಬಡ್ತಿಯ ಸೌಲಭ್ಯವನ್ನು ಹಾಗೂ ಮೂವತ್ತು ವರ್ಷಗಳ ಕಾಲ ಒಂದೂ ಪದೋನ್ನತಿ ಪಡೆಯದೆ ಮುಂದುವರೆಯುವ ಸರ್ಕಾರಿ ನೌಕರನಿಗೆ 3ನೇ ಹೆಚ್ಚುವರಿ ವೇತನ ಬಡ್ತಿಯ ಸೌಲಭ್ಯವನ್ನು ಮಂಜೂರು ಮಾಡಲು ಮಾಡಿರುವ ಶಿಫಾರಸ್ಸನ್ನು ಸರ್ಕಾರವು ಒಪ್ಪಿಕೊಂಡಿರುತ್ತದೆ ಮತ್ತು ಈ ಕೆಳಕಂಡಂತೆ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಂಡಿಕೆ 6(ii) ರಲ್ಲಿ ನಮೂದಿಸಲಾಗಿರುವ ನೌಕರರನ್ನು ಹೊರತುಪಡಿಸಿ ರಾಜ್ಯ ವೇತನ ಶ್ರೇಣಿಗಳಲ್ಲಿನ ಮೊದಲ 15 ಶ್ರೇಣಿಗಳಲ್ಲಿರುವ ಯಾವುದೇ ಒಂದು ಹುದ್ದೆಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಒಂದೂ ಪದೋನ್ನತಿ ಪಡೆಯದೆ ಮುಂದುವರಿದಿರುವ ಅಥವಾ ಮುಂದುವರಿಯುವ ಸರ್ಕಾರಿ ನೌಕರನಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಅವನು ಹೊಂದಿರುವ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ, ಆಯಾ ಪ್ರಕರಣಕ್ಕನ್ವಯ, 2ನೇ ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 1ನೇ ಏಪ್ರಿಲ್ 2012 ರಿಂದ ಜಾರಿಗೆ ಬರುವಂತೆ ಅಥವಾ 25 ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಾಂಕದಿಂದ. ಇದರಲ್ಲಿ ಯಾವುದು ನಂತರವೋ, ಆ ದಿನಾಂಕದಿಂದ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.

 ಕಂಡಿಕೆ 6(ii) ರಲ್ಲಿ ನಮೂದಿಸಲಾಗಿರುವ ನೌಕರರನ್ನು ಹೊರತುಪಡಿಸಿ ರಾಜ್ಯ ವೇತನ ಶ್ರೇಣಿಗಳಲ್ಲಿನ ಮೊದಲ 15 ಶ್ರೇಣಿಗಳಲ್ಲಿರುವ ಯಾವುದೇ ಒಂದು ಹುದ್ದೆಯಲ್ಲಿ ಮೂವತ್ತು ವರ್ಷಗಳ ಕಾಲ ಒಂದೂ ಪದೋನ್ನತಿ ಪಡೆಯದೆ ಮುಂದುವರಿದಿರುವ ಅಥವಾ ಮುಂದುವರಿಯುವ ಸರ್ಕಾರಿ ನೌಕರನಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಅವನು ಹೊಂದಿರುವ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ, ಆಯಾ ಪ್ರಕರಣಕ್ಕನ್ವಯ, 3ನೇ ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 1ನೇ ಏಪ್ರಿಲ್ 2012 ರಿಂದ ಜಾರಿಗೆ ಬರುವಂತೆ ಅಥವಾ 30 ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಾಂಕದಿಂದ. ಇದರಲ್ಲಿ ಯಾವುದು ನಂತರವೋ, ಆ ದಿನಾಂಕದಿಂದ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ ಎಂದು ಹೇಳಲಾಗಿದೆ.

ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿ ಹಾಗೂ ಅರ್ಹತಾ ಷರತ್ತುಗಳು:

ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಲ್ಲಿ ನೇಮಕಾತಿ ಪ್ರಾಧಿಕಾರವೇ ಈ ಆದೇಶದನ್ವಯ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಲು ಅಧಿಕಾರ ಹೊಂದಿರುತ್ತದೆ:

ಅ) ನೌಕರನು ತೃಪ್ತಿಕರ ಸೇವಾ ದಾಖಲೆ ಹೊಂದಿರಬೇಕು. ತೃಪ್ತಿಕರ ಸೇವೆಯನ್ನು ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಪದೋನ್ನತಿಗೆ ಅರ್ಹತೆ ನಿರ್ಧರಿಸುವ ರೀತಿಯಲ್ಲಿಯೇ ನಿರ್ಧರಿಸತಕ್ಕದ್ದು.

ಆ) ಆ ಹುದ್ದೆಗೆ ನೇಮಕಾತಿ ನಿಯಮಗಳಲ್ಲಿ ಪದೋನ್ನತಿಗೆ ಅವಕಾಶ ಕಲ್ಪಿಸಿರುವಲ್ಲಿ, ಪದೋನ್ನತಿಗಾಗಿ ನಿಗಧಿಪಡಿಸಿರುವ ಅರ್ಹತೆಯನ್ನು ಅವರು ಹೊಂದಿರಬೇಕು. ಆದಾಗ್ಯೂ ಈ ಕೆಳಕಂಡಂತೆ ಸಡಿಲಿಕೆ ಕಲ್ಪಿಸಿದೆ:

(1) ಮೇಲಿನ ಹುದ್ದೆಗೆ ಪದೋನ್ನತಿಗೆ ಶೈಕ್ಷಣಿಕ ಅಥವಾ ವೃತ್ತೀಯ ವಿದ್ಯಾರ್ಹತೆ ನಿಗಧಿಪಡಿಸಿರುವಲ್ಲಿ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿಗೆ ಆ ಅರ್ಹತೆಯನ್ನು ಪಡೆದಿರಲೇಬೇಕೆಂದು ಒತ್ತಾಯಿಸಬಾರದು. ಆದರೆ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿಗಾಗಿ ಸರ್ಕಾರಿ ನೌಕರನು ತಾನು ಹೊಂದಿರುವ ಹುದ್ದೆಗೆ ನಿಗಧಿಪಡಿಸಿರುವ ಕನ್ನಡ ಭಾಷಾ ಪರೀಕ್ಷೆ ಮತ್ತು ಇಲಾಖಾ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿರಲೇಬೇಕು.

(2) ಗ್ರೂಪ್-ಡಿ ನೌಕರರಿಗೆ ಸಂಬಂಧಿಸಿದಂತೆ, ಶೈಕ್ಷಣಿಕ ವಿದ್ಯಾರ್ಹತೆ ಪಡೆದಿರಬೇಕೆಂದು ಅಥವಾ ಕನ್ನಡ ಭಾಷಾ ಪರೀಕ್ಷೆ ಅಥವಾ ಪದೋನ್ನತಿಗಾಗಿ ನಿಗಧಿಪಡಿಸಿರುವ ಇಲಾಖಾ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಲೇ ಬೇಕೆಂದು ಒತ್ತಾಯಿಸಬಾರದು.

(3) ವಾಹನ ಚಾಲಕರಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಪದೋನ್ನತಿಗಾಗಿ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಲೇ ಬೇಕೆಂದು ಒತ್ತಾಯಿಸಬಾರದು.

ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿ ಉದ್ದೇಶಕ್ಕಾಗಿ ಗಣನೆಗೆ ತೆಗೆದುಕೊಳ್ಳಬೇಕಾದ ಸೇವೆ:

 ಈ ಕೆಳಗಿನ ಸೇವೆಯನ್ನು ಹೊರತುಪಡಿಸಿ ಒಬ್ಬ ಸರ್ಕಾರಿ ನೌಕರನು ತಾನು ಹೊಂದಿರುವ ಹುದ್ದೆಯಲ್ಲಿ 25 ಅಥವಾ 30 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸತತ ಸೇವೆ ಸಲ್ಲಿಸಿರಬೇಕು.

(i) ಸ್ಥಳೀಯ ಅಭ್ಯರ್ಥಿ ಸೇವೆ.

(ii) ಕಾರ್ಯಧೃತ ಸಿಬ್ಬಂದಿ ಸೇವೆ.

(iii) ವೃಂದ ಅಥವಾ ಹುದ್ದೆ ಬದಲಾವಣೆಯ ಪರಿಣಾಮವಾಗಿ ಯಾವುದೇ ಇಲಾಖೆ ಅಥವಾ ಸೇವೆಯಲ್ಲಿ ಪದೋನ್ನತಿಗಾಗಿ ಜೇಷ್ಠತೆಯನ್ನು ನಿರ್ಧರಿಸುವ ಉದ್ದೇಶಕ್ಕೆ ಪರಿಗಣಿತವಾಗದ ಒಂದು ಇಲಾಖೆಯ ಹಿಂದಿನ ಹುದ್ದೆ ಅಥವಾ ವೃಂದದಲ್ಲಿ ಸಲ್ಲಿಸಿದ ಸೇವೆ ; ಮತ್ತು

(iv) ಒಂದೇ ಹುದ್ದೆಯಲ್ಲಿ 25 ಅಥವಾ 30 ವರ್ಷಗಳ ಸೇವೆಯನ್ನು ಲೆಕ್ಕ ಮಾಡುವಾಗ ಪದೋನ್ನತಿಗಾಗಿ ಜೇಷ್ಠತೆಯನ್ನು ನಿರ್ಧರಿಸುವ ಉದ್ದೇಶಕ್ಕೆ ಪರಿಗಣಿಸಲ್ಪಡದ ಇತರ ಯಾವುದೇ ಸೇವೆ.

ಟಿಪ್ಪಣಿ: ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿಗಾಗಿ ನಿಗದಿತ ಸೇವೆಯನ್ನು ಎಣಿಕೆ ಮಾಡುವಾಗ ಕಾಲಕಾಲಕ್ಕೆ ಜಾರಿಯಲ್ಲಿರುವ ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಾವಳಿ, 1957 ರನ್ವಯ ಜೇಷ್ಠತೆ ನಿರ್ಧರಿಸುವ ಉದ್ದೇಶಕ್ಕೆ ಪರಿಗಣಿಸಲ್ಪಡುವ ಸೇವೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular