ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೇಕಡ 50ರಷ್ಟು ಮೀಸಲಾತಿ ಅನ್ವಯಿಸಿ ನೇಮಕ ಮಾಡುವ ಸಂಬಂಧ ಡಿಪಿಎಆರ್ ಹೊರಡಿಸಿರುವ ಆದೇಶ ಪರಿಷ್ಕರಿಸಲು ಸಿಎಂ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸರ್ಕಾರದ ಆದೇಶದಲ್ಲಿ ಒಳ ಮೀಸಲಾತಿ ಅಳವಡಿಸುವ ಪ್ರಸ್ತಾಪವೇ ಇಲ್ಲ. ಇದರಿಂದ ಪರಿಶಿಷ್ಟರ ಎಡಗೈ ಸಮುದಾಯಕ್ಕೆ ಅಘಾತವಾಗಿದೆ. ಪರಿಶಿಷ್ಟ ಜಾತಿಯ ಶೇಕಡ 15ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಅಳವಡಿಸಲೇಬೇಕು. ಈ ಬಗ್ಗೆ ಮಾರ್ಚ್ 5 ರಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿರುವುದಾಗಿ ಸಚಿವ ಮುನಿಯಪ್ಪ ತಿಳಿಸಿದ್ದಾರೆ.
ಫೆಬ್ರವರಿ 26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಹಿಂದಿನಂತೆ ಶೇಕಡ 50ರಷ್ಟು ಮೀಸಲಾತಿ ಅನ್ವಯಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಈ ವಿಚಾರವಾಗಿ ಅಡ್ವೊಕೇಟ್ ಜನರಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದ್ದು, ಒಳ ಮೀಸಲಾತಿ ಅನುಷ್ಠಾನಕ್ಕೆ ಯಾವುದೇ ಅಡ್ಡಿ ಇಲ್ಲವೆಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳೊಂದಿಗೂ ಈ ಬಗ್ಗೆ ಚರ್ಚಿಸಲಾಗಿದ್ದು, ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಡಿಪಿಎಆರ್ ಆದೇಶ ಪರಿಷ್ಕರಣೆ ಬಗ್ಗೆ, ಒಳ ಮೀಸಲಾತಿ ಅನ್ವಯಿಸಿ ನೇಮಕಾತಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

