HomeKarnatakaಡಿಜಿಟಲ್ ಜನಗಣತಿ: ಸಾರ್ವಜನಿಕರಿಗೆ ಸ್ವಯಂ ಗಣತಿಯಲ್ಲಿ ಭಾಗವಹಿಸಲು ಅವಕಾಶ

ಡಿಜಿಟಲ್ ಜನಗಣತಿ: ಸಾರ್ವಜನಿಕರಿಗೆ ಸ್ವಯಂ ಗಣತಿಯಲ್ಲಿ ಭಾಗವಹಿಸಲು ಅವಕಾಶ

ಜನಗಣತಿಯು ದೇಶದ ಜನಸಂಖ್ಯೆಯ ಗಣತಿಯ ಜೊತೆಗೆ, ದೇಶದ ಸಾಮಾಜಿಕ-ಆರ್ಥಿಕ ಸ್ಥಿತಿಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ದಾಖಲಿಸುವ ವೈಜ್ಞಾನಿಕ ಪ್ರಕ್ರಿಯೆಯಾಗಿದ್ದು ಭಾರತದ ಮೊದಲ ಡಿಜಿಟಲ್ ಜನಗಣತಿ ಮತ್ತು 16ನೇ ಜನಗಣತಿಯು ಏಪ್ರಿಲ್‌ನಿಂದ 2 ಹಂತದಲ್ಲಿ ಆರಂಭಗೊಳ್ಳಲಿದೆ.

ಈ ಜನಗಣತಿಯ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್ ಪೋರ್ಟಲ್ ಮೂಲಕ ಸ್ವಯಂ- ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ.

ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ಏಪ್ರಿಲ್ 16 ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ 15 ದಿನಗಳ ಮುಂಚಿತವಾಗಿ ಅಂದರೆ ಏಪ್ರಿಲ್ 1 ರಿಂದ 15 ವರೆಗೆ ಸ್ವಯಂ ಗಣತಿ ಕಾರ್ಯಕ್ಕೆ ಅವಕಾಶ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರ್ವಜನಿಕರು ಸ್ವಯಂ ಗಣತಿ ವೆಬ್ ಪೋರ್ಟಲ್ se.census.gov.in ಬಳಸಿಕೊಂಡು ತಮ್ಮ ಕುಟುಂಬದ ಸಾಮಾನ್ಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಏ.1 ರಿಂದ 15 ವರೆಗೆ ಸ್ವಯಂ ಗಣತಿ ವೆಬ್ ಪೋರ್ಟಲ್ ಲಭ್ಯವಿದ್ದು, ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಸಾಧನಗಳ ಮೂಲಕ ನಮೂದಿಸಬಹುದು. ಇದರಿಂದ ಸಮಯದ ಉಳಿತಾಯ ಜೊತೆಗೆ ನಿಖರ ಹಾಗೂ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿ ಆಗಲಿದೆ.

ಮಾಹಿತಿ ಭರ್ತಿಯ ವೇಳೆ ಕುಟುಂಬಗಳು ತಮ್ಮ ಸ್ಥಳದ ವಿವರಗಳನ್ನು (ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ/ ಪಟ್ಟಣ/ ನಗರ ಇತ್ಯಾದಿ) ಕಡ್ಡಾಯವಾಗಿ ನಮೂದಿಸಬೇಕು. ಸ್ಥಳವನ್ನು ನಿಖರವಾಗಿ ಗುರುತಿಸಲು ಪಿನ್ ಕೋಡ್ ಮತ್ತು ಡಿಜಿಟಲ್ ಮ್ಯಾಪ್ ಮೂಲಕ ಮನೆಯ ಸ್ಥಳವನ್ನು ಗುರುತಿಸುವ ವ್ಯವಸ್ಥೆಯೂ ಇರುತ್ತದೆ.

ಸ್ವಯಂ-ಗಣತಿ (Self-Enumeration) ಪೋರ್ಟಲ್‌ನಲ್ಲಿ ಕೇಳಿರುವ ಕೇಳುವ ಪ್ರಶ್ನೆಗಳಿಗೆ ಮನೆಪಟ್ಟಿ ಕಾರ್ಯಾಚರಣೆ ಮೊಬೈಲ್ ಆಪ್ ನಲ್ಲಿರುವಂತೆಯೇ ರೂಪಿಸಲಾಗಿದ್ದು, ಕೆಲವು ಮಾಹಿತಿಗಳು ಪೂರ್ವಭರ್ತಿಯಾಗಿರಬಹುದು. ಸಾರ್ವಜನಿಕರಿಗೆ ಸಹಾಯವಾಗುವಂತೆ ಪದೇ ಪದೇ ಕೇಳುವ ಪ್ರಶ್ನೆಗಳು (FAQs) ಮತ್ತು ಮಾರ್ಗಸೂಚಿಗಳನ್ನೂ ಇದರಲ್ಲಿ ಒದಗಿಸಲಾಗಿದೆ.

ಕುಟುಂಬವು ತಮ್ಮ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಅವರಿಗೆ ಒಂದು ವಿಶಿಷ್ಟ ಸ್ವಯಂ-ಗಣತಿ ಐಡಿ (Self-Enumeration ID) ನೀಡಲಾಗುತ್ತದೆ. ಈ ಐಡಿಯನ್ನು ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಅದನ್ನು ಮನೆಗೆ ಭೇಟಿ ನೀಡುವ ಗಣತಿದಾರರಿಗೆ (Enumerator) ಈ ಐಡಿಯನ್ನು ಸಾರ್ವಜನಿಕರು ಹಂಚಿಕೊಳ್ಳಬಹುದು.

ಸಾರ್ವಜನಿಕರು ತಮ್ಮ ಜನಗಣತಿ ವಿವರಗಳನ್ನು ಆನ್‌ಲೈನ್‌ನಲ್ಲಿ ವೇಗವಾಗಿ ಮತ್ತು ಸುರಕ್ಷಿತವಾಗಿ ಭರ್ತಿ ಮಾಡಬಹುದಾಗಿದ್ದು, ಏಪ್ರಿಲ್ 16 ರಿಂದ ಮೇ 15 ರ ವರೆಗಿನ ಅವಧಿಯಲ್ಲಿ ಗಣತಿದಾರರು ಮನೆಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸುತ್ತಾರೆ. ಈ ವೇಳೆಯಲ್ಲಿ ನಿಮ್ಮ SE ID ಅನ್ನು (Enumerator) ಮನೆಗೆ ಬಂದಾಗ ಅದನ್ನು ಹಂಚಿಕೊಳ್ಳಬಹುದು.

ಒಂದು ವೇಳೆ ಸಾರ್ವಜನಿಕರು ತಮ್ಮ ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ, ಗಣತಿದಾರರು ತಮ್ಮಿಂದಲೇ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಸ್ವಯಂ ಗಣತಿಯು 100% ಗೌಪ್ಯತೆಯ ಭದ್ರತೆಯನ್ನು ನೀಡಲಿದ್ದು, ಪ್ರತಿಯೊಬ್ಬರೂ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ, ದೇಶದ ಜವಾಬ್ದಾರಿಯುತ ನಾಗರಿಕರಾಗಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular