HomeKarnatakaಇನ್ಮುಂದೆ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ AI ಬಳಕೆ: ನ್ಯಾಯ ಸೇತು ಎಂಬ ಹೊಸ ಟೂಲ್ ಅಭಿವೃದ್ಧಿಪಡಿಸಿದ...

ಇನ್ಮುಂದೆ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ AI ಬಳಕೆ: ನ್ಯಾಯ ಸೇತು ಎಂಬ ಹೊಸ ಟೂಲ್ ಅಭಿವೃದ್ಧಿಪಡಿಸಿದ ಐಐಐಟಿ ಬೆಂಗಳೂರು ವಿದ್ಯಾರ್ಥಿಗಳು

ಬೆಂಗಳೂರು: ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ಅದರಲ್ಲಿಯೂ ಕೃತಕ ಬುದ್ಧಿಮತ್ತೆ (ಎಐ) ಪ್ರತಿ ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದೆ. ಇದೀಗ ನ್ಯಾಯಾಂಗ ವ್ಯವಸ್ಥೆಗೂ ಎಐ ಕಾಲಿಟ್ಟಿದೆ.

ಹೌದು. ಐಐಐಟಿ ಬೆಂಗಳೂರು ವಿದ್ಯಾರ್ಥಿಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ಬಳಸಬಹುದಾದ ಹೊಸ ಎಐ ಟೂಲ್ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ನ್ಯಾಯ ಸೇತು ಎಂದು ಹೆಸರಿಟ್ಟಿದ್ದಾರೆ. ಇದು ನ್ಯಾಯಾಲಯದಲ್ಲಿ ವರ್ಷಗಟ್ಟಲೆ ವಿಚಾರಣೆಗಾಗಿ ಬಾಅಕಿ ಇರುವ ಪ್ರಕರಣಗಳನ್ನು ಮಾತುಕತೆ, ರಾಜಿ ಅಥವಾ ಲೋಕ ಅದಾಲತ್ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿರುವ ಕೇಸ್ ಗಳನ್ನು ಗುರುತಿಸಿ ಶಿಫಾರಸು ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐಐಐಟಿ ಬೆಂಗಳೂರಿನ ವಿದ್ಯಾರ್ಥಿಗಳಾದ ಹರ್ಷಿತ್ ಖಟ್ಟರ್, ಆರುಷ್ ಗುಪ್ತಾ, ಉತ್ಕರ್ಷ್ ಗುಪ್ತಾ ಮತ್ತು ಆದರ್ಶ್ ಸಿಂಗ್ ಅವರನ್ನೊಳಗೊಂಡ ತಂಡ ಈ ತಂತ್ರಜ್ಞಾನ ರೂಪಿಸಿದೆ. ‘ಐಡಿಯಾಸ್ ಫಾರ್ ಇಂಡಿಯಾ ಇನ್ನೋವೇಶನ್ ಚಾಲೆಂಜ್ 2026’ ಸ್ಪರ್ಧೆಯಲ್ಲಿ ‘ಇನ್ಕ್ಲೂಸಿವ್ ಇನ್ನೋವೇಶನ್ ಫಾರ್ ಭಾರತ್’ ವಿಭಾಗದಲ್ಲಿ ಈ ತಂಡ ಪ್ರಶಸ್ತಿಯನ್ನು ಗಳಿಸಿದೆ.

ದೇಶದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಸದ್ಯ ಸುಮಾರು 5 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಈ ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಿ, ಯಾವ ವಿವಾದಗಳನ್ನು ಮಾಧ್ಯಸ್ಥಿಕೆ ಅಥವಾ ರಾಜಿ ಸಂಧಾನದ ಮೂಲಕ ಬೇಗ ಪರಿಹರಿಸಬಹುದು ಎಂಬುದನ್ನು ಈ ಎಐ ಉಪಕರಣವು ಪತ್ತೆ ಹಚ್ಚುತ್ತದೆ. ಮಾತ್ರವಲ್ಲದೆ, ಆ ಪ್ರಕರಣಗಳನ್ನು ಏಕೆ ರಾಜಿ ಸಂಧಾನಕ್ಕೆ ಪರಿಗಣಿಸಬೇಕು ಎಂಬುದರ ಕಾರಣಗಳನ್ನೂ ಸಹ ಇದು ವಿವರಿಸುತ್ತದೆ.

ನ್ಯಾಯ ಸೇತು ಟೂಲ್ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಹರ್ಷಿತ್ ಖಟ್ಟರ್, ನ್ಯಾಯಾಲಯಗಳ ಮೆಟ್ಟಿಲೇರುವ ಸಾಮಾನ್ಯ ಜನರ ವಿವಾದಗಳು ಸುದೀರ್ಘ ಕಾಲ ವಿಚಾರಣೆಯಲ್ಲಿ ಉಳಿಯುತ್ತವೆ. ಕಾನೂನು ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೆ ಮತ್ತಷ್ಟು ಸುಲಭವಾಗಿಸಲು ನಾವು ‘ನ್ಯಾಯ ಸೇತು’ ರೂಪಿಸಿದ್ದೇವೆ” ಎಂದು ತಿಳಿಸಿದ್ದಾರೆ.

“ಸುದೀರ್ಘ ನ್ಯಾಯಾಲಯದ ಪ್ರಕ್ರಿಯೆಗಳಿಲ್ಲದೆ ವಿವಾದಗಳನ್ನು ಪರಿಹರಿಸುವ ಸಾಧ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ನ್ಯಾಯವು ಎಲ್ಲರಿಗೂ ವೇಗವಾಗಿ ಮತ್ತು ಸುಲಭವಾಗಿ ಸಿಗಬೇಕು” ಎಂದು ಆರುಷ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಈ ಸಾಧನ ಕೇವಲ ಸಹಾಯಕ ಸಾಧನವಾಗಿದ್ದು, ಅಂತಿಮವಾಗಿ ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಒಪ್ಪಿಸುವ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವು ಕಾನೂನು ಸಮಿತಿ ಹಾಗೂ ನ್ಯಾಯಾಲಯಗಳ ಬಳಿಯೇ ಇರುತ್ತದೆ. ಒಟ್ಟಾರೆ ವಿದ್ಯಾರ್ಥಿಗಳ ಹೊಸ ಆವಿಷ್ಕಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆಯನ್ನು ತಗ್ಗಿಸಲು ಮತ್ತು ಜನಸಾಮಾನ್ಯರಿಗೆ ವೇಗವಾಗಿ ನ್ಯಾಯ ಒದಗಿಸಲು ಸಹಾಯಕವಾಗಲಿದೆ ಎಂಬುದಂತು ಸತ್ಯ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular