ಧಾರವಾಡ: ಪೊಕ್ಸೋ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿ ಸಂತ್ರಸ್ತೆ ಅಪ್ರಾಪ್ತ ಬಾಲಕಿಗೆ ಬೆಅರಿಕೆ ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಈ ಮೂಲಕ ಜೈಲುಗಳಲ್ಲಿ ಕೈದಿಗಳಿಗೆ ಮೊಬೈಲ್ ಫೋನ್ ಗಳ ಸುಲಭ ಲಭ್ಯತೆ ಬಗ್ಗೆ ಮತ್ತಷ್ಟು ಗಂಬೀರ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಧಾರವಾಡದ ಕೇಂದ್ರ ಕಾರಾಗೃಹದಲ್ಲಿರುವ ಪೋಕ್ಸೊ ಪ್ರಕರಣದ ಆರೋಪಿ, ಜೈಲಿನಿಂದಲೇ ಅಪ್ರಾಪ್ತ ಬಾಲಕಿಗೆ ವಿಡಿಯೋ ಕರೆ ಮಾಡಿ ನಿರಂತರ ಕಿರುಕುಳ ನೀಡಿದ್ದಾನೆ. ಅಲ್ಲದೇ ಬಾಲಕಿಗೆ ಬೆದರಿಕೆ ಹಾಕುತ್ತಾ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಮಾತನಾಡಲು ಒತ್ತಾಯಿಸಿದ್ದಾನೆ.
ಆರೋಪಿಯು ತನ್ನ ಕೈ ಮೇಲೆ ಸಂತ್ರಸ್ತೆಯ ಹೆಸರನ್ನು ಬರೆದುಕೊಂಡು ವಿಡಿಯೋ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸ್ ಅಧಿಕಾರಿಗಳು ಜೈಲುಗಳಲ್ಲಿ ಮೊಬೈಲ್‌ಗಳ ಬಳಕೆಗೆ ಅವಕಾಶವಿಲ್ಲ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ, ಈ ಪ್ರಕರಣವು ಇದಕ್ಕೆ ವ್ಯತಿರಿಕ್ತವಾದ ಚಿತ್ರಣವನ್ನು ನೀಡಿದೆ. ಲವ್ ಜಿಹಾದ್ ಆರೋಪವೂ ಕೇಳಿಬಂದಿರುವ ಈ ಪ್ರಕರಣದ ಆರೋಪಿಯು ಬಾಲಕಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದು, ಆಕೆಯ ಕುಟುಂಬ ಆತಂಕಗೊಂಡಿದೆ. ಜೈಲಾಧಿಕಾರಿಗಳ ಸಹಾಯವಿಲ್ಲದೆ ಇಂತಹ ಕೃತ್ಯ ಅಸಾಧ್ಯ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

